ಹೊಸದಿಲ್ಲಿ: ತೈಲ ಹೊತ್ತೂಯ್ಯುತ್ತಿದ್ದ ಮಾರ್ಲಿನ್ ಲುವಾಂಡಾ ಎಂಬ ವಾಣಿಜ್ಯ ಹಡಗಿನ ಮೇಲೆ ಶುಕ್ರವಾರ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಗಲ್ಫ್ ಆಫ್ ಏಡನ್‌ನಲ್ಲಿ ಈ ಘಟನೆ ನಡೆದಿದೆ. 21 ಮಂದಿ ಭಾರತೀಯ ಸಿಬಂದಿ ಈ ಹಡಗಿನಲ್ಲಿದ್ದು, ಅಪಾಯದ ತುರ್ತು ಸಂದೇಶ ರವಾನೆಯಾಗುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಭಾರತೀಯ ನೌಕಾ ಪಡೆಯ ಐಎನ್‌ಎಸ್ ವಿಶಾಖ ಪಟ್ಟಣಂ ನೌಕೆ ಎಲ್ಲರನ್ನೂ ರಕ್ಷಿಸಿದೆ.
ದಾಳಿಯಿಂದ ಲುವಾಂಡಾ ಹಡ ಗಿಗೆ ಬೆಂಕಿ ಹೊತ್ತಿಕೊಂಡು ಹಲವು ತಾಸು ಉರಿಯುತ್ತಿತ್ತು. ನೆರವು ಕೋರಿ ಸಂದೇಶ ಬರುತ್ತಿದ್ದಂತೆ ಯುಎಸ್‌ಎಸ್ ಕಾರ್ನಿ ಸಹಿತ ಹಲವು ಹಡಗು ಗಳನ್ನು ಕಳುಹಿಸಲಾಗಿತ್ತು. ಐಎನ್‌ಎಸ್ ವಿಶಾಖಪಟ್ಟಣಂ ಕೂಡ ಅಲ್ಲಿಗೆ ಧಾವಿಸಿತ್ತು.
ಯುದ್ಧ ನೌಕೆಯು ಹಡಗಿನ ಬೆಂಕಿಯನ್ನು ಆರಿಸುವಲ್ಲಿ ನೆರವಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಏಡನ್ ಕೊಲ್ಲಿಯಲ್ಲೇ ಗಸ್ತು ತಿರುಗುತ್ತಿದ್ದ ಅಮೆರಿಕದ ಹಡಗು ಯುಎಸ್‌ಎಸ್ ಕಾರ್ನಿ ಮೇಲೂ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ ಅಮೆರಿಕದ ಪಡೆ ಆ ಕ್ಷಿಪಣಿಯನ್ನೇ ಹೊಡೆದುರುಳಿಸಿರುವುದಾಗಿ ಹೇಳಿದೆ. ಅಲ್ಲದೆ ಕೆಂಪು ಸಮುದ್ರವನ್ನು ಗುರಿಯಾಗಿಸಿ ಉಡಾಯಿಸಲು ಸಜ್ಜುಗೊಂಡಿದ್ದ ಹೌತಿಗಳ ಕ್ಷಿಪಣಿಯನ್ನೂ ಶನಿವಾರ ಧ್ವಂಸಗೊಳಿಸಿದ್ದಾಗಿ ಅಮೆರಿಕ ಹೇಳಿದೆ.
ನಿರಂತರ ದಾಳಿ
ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಸಂಘರ್ಷದ ಬಳಿಕ ಗಾಜಾವನ್ನು ಬೆಂಬಲಿಸುತ್ತಿರುವ ಹೌತಿ ಬಂಡುಕೋರರು ಇಸ್ರೇಲ್ ಸಹಿತ ಪಶ್ಚಿಮ ರಾಷ್ಟ್ರಗಳ ಹಡಗುಗಳನ್ನು ಗುರಿಯಾಗಿಸಿ ಸತತವಾಗಿ ದಾಳಿ ನಡೆಸುತ್ತಿದ್ದಾರೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಸಂಚರಿಸುತ್ತಿರುವ ರಾಷ್ಟ್ರಗಳ ಹಡಗುಗಳ ಮೇಲೆ ಆಗಾಗ ಕ್ಷಿಪಣಿ ದಾಳಿ ನಡೆಯುತ್ತಲೇ ಇದೆ.