Advertisement

ಗಲ್ಫ್ ಬಿಕ್ಕಟ್ಟು ತೀವ್ರ

07:05 AM Dec 06, 2017 | Harsha Rao |

ಕುವೈತ್‌: ಕತಾರ್‌ ವಿರುದ್ಧ ನಿಷೇಧ ಹೇರಿದ್ದರಿಂದಾಗಿ ಉಂಟಾದ ಗಲ್ಫ್ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿದ್ದು, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಹಾಗೂ ಸೌದಿ ಅರೇಬಿಯಾ ಹೊಸ ಆರ್ಥಿಕ ಸಮೂಹವನ್ನು ರಚಿಸಿಕೊಂಡಿದ್ದಾಗಿ ಘೋಷಿಸಿವೆ. ಇದರಿಂದ ಗಲ್ಫ್ ಸಹಕಾರ ಕೌನ್ಸಿಲ್‌ ಮುಂದಿನ ದಿನಗಳಲ್ಲಿ ನನೆಗುದಿಗೆ ಬೀಳಲಿದೆ. ಹೊಸ ಜಂಟಿ ಸಹಕಾರ ಸಮಿತಿಯನ್ನು ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಯೇದ್‌ ಅಲ್‌ ನೇಯ್‌ಹೆನ್‌ ಅನುಮೋದಿಸಿದ್ದಾಗಿ ಹೇಳಲಾಗಿದೆ.

Advertisement

ಗಲ್ಫ್ ಸಹಕಾರ ಕೌನ್ಸಿಲ್‌ ಸಭೆಗೂ ಮುನ್ನ ಈ ಘೋಷಣೆ ಹೊರಬಿದ್ದಿದ್ದು ಅತ್ಯಂತ ಮಹತ್ವದ್ದಾಗಿದೆ. ಆದರೆ ಆರು ದೇಶಗಳ ಸದಸ್ಯತ್ವದ ಈ ಕೌನ್ಸಿಲ್‌ನ ಮೇಲೆ ಹೊಸ ಸಮೂಹ ಯಾವ ಪರಿಣಾಮ ಉಂಟು ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗಾಗಲೇ ಕತಾರ್‌ ವಿಚಾರವನ್ನೇ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂಬುದು ಖಚಿತವಾಗಿದ್ದು, ಖತಾರ್‌ನ ಹೆಚ್ಚಿನ ಅಧಿಕಾರಿಗಳು ಈ ಸಭೆಯಿಂದ ದೂರವಿರಲಿದ್ದಾರೆ. ಖತಾರ್‌ ರಾಜ ಶೇಖ್‌ತಮೀಮ್‌ ಜಿಸಿಸಿ ಸಭೆಯಲ್ಲಿ ಭಾಗವಹಿಸಲು ಆಹ್ವಾನ ಸ್ವೀಕರಿಸುತ್ತಿದ್ದಂತೆಯೇ, ಸೌದಿ ರಾಜ ಸಲ್ಮಾನ್‌ ಸಭೆಗೆ ತೆರಳದಿರಲು ನಿರ್ಧರಿಸಿದ್ದಾರೆ.

ಸೌದಿ ಅರೇಬಿಯಾ ಮತ್ತು ಯುಎಇ ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿವೆ. ಈ ಹೊಸ ಸಮೂಹವು ಮಿಲಿಟರಿ, ಆರ್ಥಿಕ ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ ಬದ್ಧವಾಗಿದೆ. ಈ ಸಮೂಹದಲ್ಲಿ ಇತರ ಗಲ್ಫ್ ರಾಷ್ಟ್ರಗಳೂ ಸೇರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಸಹಜವಾಗಿಯೇ ಇತರ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಅವರು ಜಿಸಿಸಿ ತೊರೆದು ಹೊಸ ಸಮೂಹಕ್ಕೆ ಸೇರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next