Advertisement

ಮಾಸಾಶನಕ್ಕಾಗಿ ವೃದ್ಧರ ಪರದಾಟ

01:53 PM Mar 11, 2020 | Naveen |

ಗುಳೇದಗುಡ್ಡ: ಸರ್ಕಾರ ಅನೇಕ ಯೋಜನೆ ಜಾರಿಗೆ ತಂದರೂ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಪಟ್ಟಣದ ಅಂಚೆ ಕಚೇರಿಯೇ ಸಾಕ್ಷಿಯಾಗಿದೆ. ಇಲ್ಲಿ ಮಾಸಾಶನ ಪಡೆಯಲು ದಿನವಿಡಿ ಕಾಯಬೇಕಾಗಿದೆ.

Advertisement

ಅಂಚೆ ಕಚೇರಿಯಲ್ಲಿ ನಿತ್ಯವು ವೃದ್ಧರು ಮಾಸಾಶನ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಸರಕಾರ ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನವನ್ನು ಅಂಚೆ ಕಚೇರಿಯ ಖಾತೆಗೆ ಜಮೆ ಮಾಡುತ್ತಿರುವುದರಿಂದ ನಿತ್ಯವು ಜನರು ಖಾತೆಗೆ ಜಮೆಯಾದ ಹಣ ಡ್ರಾ ಮಾಡಿಕೊಳ್ಳಲು ಸರದಿಯಲ್ಲಿ ನಿಲ್ಲಬೇಕಾಗಿದೆ. ಇದರಿಂದ ನಿತ್ಯವು ವೃದ್ಧರು ರೋಸಿ ಹೋಗುವಂತಾಗಿದೆ.

ಮೊದಲು ವೃದ್ಧರು ನಮ್ಮ ಹಣ ಜಮೆಯಾಗಿಲ್ಲ. ಮಾಸಾಶನ ಕೊಟ್ಟಿಲ್ಲ ಎಂದು ಕಚೇರಿ ಎದುರು ಸರದಿಯಲ್ಲಿ ನಿಲ್ಲುವಂತಾಗುತ್ತಿತ್ತು. ಆದರೆ, ಈಗ ಮಾಸಾಶನ ಖಾತೆಗೆ ಜಮೆಯಾಗಿದ್ದರೂ ಅದನ್ನು ಪಡೆದುಕೊಳ್ಳಲು ಕಚೇರಿ ಎದುರು ಕುಳಿತುಕೊಳ್ಳುವಂತಾಗಿದೆ. ಮೊದಲೇ ವಯಸ್ಸಾಗಿ ಮುಪ್ಪಾಗಿದ್ದೇವೆ. ದಿನಗಟ್ಟಲೇ ಊಟ-ನೀರು ಇಲ್ಲದೇ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಯಾರಿಗೂ ಈ ಗೋಳು ಕೇಳುತ್ತಿಲ್ಲ ಎಂಬುದು ವೃದ್ಧರ ಆರೋಪವಾಗಿದೆ.

6ಸಾವಿರಕ್ಕಿಂತ ಹೆಚ್ಚು ಖಾತೆ: ಪಟ್ಟಣದ ಅಂಚೆ ಕಚೇರಿಯಲ್ಲಿ ಸುಮಾರು 6 ಸಾವಿರ ಖಾತೆಗಳಿದ್ದು, ಈ ಖಾತೆಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ, ಅಂಗವಿಕಲರ ಖಾತೆಗಳೇ ಹೆಚ್ಚಿನವು ಇದ್ದು, ಇದರ ಜತೆಗೆ ಆರ್‌ಡಿ., ಸುಕನ್ಯಾ ಸಮೃದ್ಧಿ ಯೋಜನೆ, ಪ್ರಾವಿಡೆಂಟ್‌ ಫಂಡ್‌ ತುಂಬುವವರ ಸಹ ಖಾತೆಗಳಿವೆ. ಇದರಿಂದ ನಿತ್ಯ ಕಚೇರಿ ಜನರಿಂದ, ವೃದ್ಧರಿಂದ ತುಂಬಿರುತ್ತದೆ. ಇದರಿಂದ ಜನರು ದಿನಗಟ್ಟಲೇ ಸರದಿಯಲ್ಲಿ ನಿಲ್ಲುವಂತಾಗಿದೆ. ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ವೃದ್ಧರ ಆರೋಪ.

ನಾಲ್ವರು ಸಿಬ್ಬಂದಿ: ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮಾಸ್ಟರ್‌ ಸೇರಿ ಒಟ್ಟು ನಾಲ್ವರು ಸಿಬ್ಬಂದಿಗಳಿದ್ದು, ಪೋಸ್ಟ್‌ ಮಾಸ್ಟರ್‌ ಸಹ ಪ್ರಭಾರಿಯಾಗಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಗಳ ಸಮಸ್ಯೆ ಇರುವುದರಿಂದಲೇ ವೃದ್ಧರು ಮಾಸಾಶನದ ವೇತನ ಪಡೆದುಕೊಳ್ಳಲು ಪರದಾಡುವಂತಾಗಿದೆ.

Advertisement

ಇನ್ನೊಂದು ಕೌಂಟರ್‌ ಬೇಕು: ಸದ್ಯ ಅಂಚೆ ಕಚೇರಿಯಲ್ಲಿ ಒಂದೇ ಕೌಂಟರ್‌ ಇದೆ. ಮಾಸಾಶನ ಜಮೆಯಾದ ಬಗ್ಗೆ ಮಾಹಿತಿ ಪಡೆಯುವುದು, ಡ್ರಾ ಮಾಡುವುದು, ವಿವಿಧ ಯೋಜನೆಗಳಿಗೆ ಹಣ ತುಂಬುವುದು ಕೌಂಟರ್‌ ನಲ್ಲಿ ನಡೆಯುತ್ತಿದೆ. ಇಲಾಖೆ ಇನ್ನೊಂದು ಕೌಂಟರ್‌ ತೆರೆಯಬೇಕೆಂಬುದು ವಯೋವೃದ್ಧರ ಆಗ್ರಹವಾಗಿದೆ.

ಮನೆ ಬಾಗಿಲಿಗೆ ಪೇಮೆಂಟ್‌ ಬ್ಯಾಂಕ್‌
ಅಂಚೇ ಇಲಾಖೆ ತನ್ನ ಗ್ರಾಹಕರು ಈ ರೀತಿ ಸರದಿ ಸಾಲಿನಲ್ಲಿ ನಿಂತು ಹೈರಾಣಾಗಬಾರದು ಎಂದು ಹೊಸ ಸೇವೆ ಆರಂಭಿಸಿದ್ದು, ಅಂಚೆ ಇಲಾಖೆಯ ಪೋಸ್ಟ್‌ಮನ್‌ ಮನೆ ಬಾಗಿಲಿಗೆ ಬರಲಿದ್ದಾರೆ. ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಹೊಸ ಸೇವೆ ಮಾಡಿದ್ದು, ಯಾವುದೇ ಬ್ಯಾಂಕಿನ ನಿಮ್ಮ ಖಾತೆಯಿಂದ ಹಣ ಪಡೆಯಬಹುದು ಮತ್ತು ಬೇರೆ ಖಾತೆಗೆ ವರ್ಗಾಯಿಸಬಹುದು. ಮನೆಯಲ್ಲಿಯೇ ಕುಳಿತು ಆರ್‌.ಡಿ., ಸುಕನ್ಯಾ ಸಮೃದ್ದಿ ಯೋಜನೆ, ಪ್ರಾವಿಡೆಂಟ್‌ ಫಂಡ್‌ ತುಂಬಹುದು. ಅದಕ್ಕಾಗಿ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆದರೆ ಪೋಸ್ಟ್‌ಮನ್‌ ನಿಮ್ಮ ಮನೆಗೆ ಬಂದೂ ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತಾರೆ. ಇಲ್ಲವೇ ಡ್ರಾ ಮಾಡಿಕೊಡುತ್ತಾರೆ.

ಸರಕಾರದ ಮಾಸಾಶನಕ್ಕಾಗಿ ಮುಪ್ಪಿನ ಕಾಲದಲ್ಲಿ ದಿನಗಟ್ಟಲೇ ಕಾಯುವುದಾದರೂ ಹೇಗೆ ? ಕೌಂಟರ್‌ ಒಂದೇ ಇರುವುದರಿಂದ ಬಿಸಿಲಿನಲ್ಲಿ ಹೈರಾಣಾಗುತ್ತಿದ್ದೇವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ತೊಂದರೆಯಾಗದಂತೆ ಕ್ರಮ ಕೈ„ಗೊಳ್ಳಬೇಕು.
ಹೆಸರು ಹೇಳಲು ಇಚ್ಚಿಸದ ವೃದ್ಧರು
ಗುಳೇದಗುಡ್ಡ

ಮಾಸಾಶನ ಪಡೆಯಲು ವೃದ್ಧರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪ್ರತಿದಿನವು ಈ ರೀತಿಯಾಗುವುದಿಲ್ಲ. ತಿಂಗಳಲ್ಲಿ 8-10 ದಿನ ಸಮಸ್ಯೆಯಾಗುತ್ತಿದೆ. ಸಿಬ್ಬಂದಿಗಳ ಸಮಸ್ಯೆಯಿದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗುವುದು. ಹೊಸ ಕೌಂಟರ್‌ ತೆರೆಯಲಾಗುವುದು.
ಕಾಶಿ, ಪೋಸ್ಟ್‌ ಮಾಸ್ಟರ್‌
ಗುಳೇದಗುಡ್ಡ

„ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next