ಗುಳೇದಗುಡ್ಡ: ವೃತ್ತಿ ರಂಗಭೂಮಿಗೆ ದೊಡ್ಡ ಹೆಸರು ನೀಡಿದ ಗುಳೇದಗುಡ್ಡ ನೂತನ ತಾಲೂಕು ವ್ಯಾಪ್ತಿಯ ಹಂಸನೂರ, ಇಡೀ ಉತ್ತರ ಕರ್ನಾಟಕದಲ್ಲಿ ದೊಡ್ಡ ಹೆಸರು ಮಾಡಿದೆ. ಈ ಊರಿನಲ್ಲಿ ನೂರಾರು ಜನ ವೃತ್ತಿ ರಂಗಭೂಮಿ ಕಲಾವಿದರಿದ್ದು, ಉತ್ತರಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಇಂತಹ ಊರಿಗೆ ಕಳೆದ ಎರಡು ಅವಧಿಯಿಂದಲೂ ಇದ್ದ ಜಿಪಂ ಕ್ಷೇತ್ರ ಕೇಂದ್ರ ಸ್ಥಾನಮಾನ ಈ ಬಾರಿ ಕೈತಪ್ಪುವ ಸಾಧ್ಯತೆ ಇದೆ. ಹೊಸ ತಾಲೂಕು ರಚನೆಯಾದ ಇದೇ ಮೊದಲ ಬಾರಿಗೆ ಜಿಪಂ- ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಅತಿಚಿಕ್ಕ ತಾಲೂಕು ಎಂಬ ಖ್ಯಾತಿ ಪಡೆದ ಗುಳೇದಗುಡ್ಡ ತಾಲೂಕಿನಲ್ಲಿ ಎರಡು ಜಿಪಂ ಕ್ಷೇತ್ರಗಳು ರಚನೆಯಾಗಲಿವೆ. ಈ ಹೊಸ ತಾಲೂಕು ವ್ಯಾಪ್ತಿಯಲ್ಲಿ ಎರಡು ಜಿಪಂ ಕ್ಷೇತ್ರಗಳು ಬರಲಿದ್ದು, ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಗ್ರಾಮಗಳ ವಿಂಗಡಣೆ ಮಾಡಿ ಹುಲ್ಲಿಕೇರಿ ಎಸ್‌ಪಿ ಹಾಗೂ ಕಟಗೇರಿ ಜಿಪಂ ಕ್ಷೇತ್ರಗಳ ಕೇಂದ್ರ ಸ್ಥಾನಮಾನ ನೀಡಲು ಪ್ರಸ್ತಾವನೆ ಸಿದ್ಧಗೊಂಡಿದೆ.
ತಾಲೂಕು ಆಡಳಿತ ಸಲ್ಲಿಸಿರುವ ಈ ಪ್ರಸ್ತಾವಣೆ ಸಿಂಧುವಾದಲ್ಲಿ ಹುಲ್ಲಿಕೇರಿ ಎಸ್‌ಪಿ ಹಾಗೂ ಕಟಗೇರಿ ನೂತನ ಜಿಪಂ ಕ್ಷೇತ್ರಗಳೆಂದು ಅಂತಿಮಗೊಳ್ಳಲಿವೆ. ಕಳೆದ ಹಲವು ವರ್ಷಗಳಿಂದ ಹಂಸನೂರ ಜಿಪಂ ಕ್ಷೇತ್ರವಿತ್ತು. ಆದರೆ ಈ ಬಾರಿ ಪುನರ್‌ವಿಂಗಡಣೆಯಿಂದ ಹುಲ್ಲಿಕೇರಿ ಎಸ್‌ಪಿಗೆ ಜಿಪಂ ಕ್ಷೇತ್ರ ಒಲಿಯುವ ಸಾಧ್ಯತೆಗಳಿವೆ. ಹುಲ್ಲಿಕೇರಿ ಎಸ್‌ಪಿ ಹಾಗೂ ಕಟಗೇರಿ ಜಿಪಂ ಕ್ಷೇತ್ರಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ.
ಹುಲ್ಲಿಕೇರಿಗೆ ಒಲಿದ ಭಾಗ್ಯ: ಹುಲ್ಲಿಕೇರಿ ಎಸ್.ಪಿ. ಗ್ರಾಮವು ಪರ್ವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ವಿಶೇಷ ಏನೆಂದರೆ, ಯಾವುದೇ ಗ್ರಾಮ ಪಂಚಾಯಿತಿ ಸ್ಥಾನವಿರದ ಹುಲ್ಲಿಕೇರಿ ಎಸ್.ಪಿ.ಗೆ ಜಿಪಂ ಹಾಗೂ ತಾಪಂ ಕ್ಷೇತ್ರ ಕೇಂದ್ರ ಸ್ಥಾನಮಾನ ಭಾಗ್ಯ ಲಭಿಸಿದ್ದು, ತಾಲೂಕು ಆಡಳಿತ ಸಲ್ಲಿಸಿರುವ ಪ್ರಸ್ತಾವಣೆ ಸಿಂಧುವಾದಲ್ಲಿ ಹುಲ್ಲಿಕೇರಿ ಎಸ್‌ಪಿ ಭಾಗ್ಯ ಒಲಿಯುವುದರಲ್ಲಿ ಎರಡು ಮಾತಿಲ್ಲ.
ಹಂಸನೂರಕ್ಕೆ ಕೈತಪ್ಪಲಿದೆಯಾ ಜಿಪಂ ಕ್ಷೇತ್ರ: ಹಂಸನೂರ ಜಿಪಂ ಕ್ಷೇತ್ರ ಮೊದಲಿನಿಂದ ಇದ್ದು, ಕ್ಷೇತ್ರ ಪುನರ್ ವಿಂಗಡಣೆಯಿಂದ ಈ ಬಾರಿ ಹುಲ್ಲಿಕೇರಿ ಎಸ್.ಗೆ ಒಲಿಯುವ ಸಾಧ್ಯತೆಗಳಿದ್ದು, ಇದರಿಂದ ಹಂಸನೂರಗೆ ಜಿಪಂ ಕ್ಷೇತ್ರ ಕೈ ತಪ್ಪುವ ಸಾಧ್ಯತೆಗಳಿವೆ ಎನ್ನಲಾಗಿದೆ.
6ರ ಬದಲು 11 ತಾಪಂ ಕ್ಷೇತ್ರ: ಗುಳೇದಗುಡ್ಡ ತಾಲೂಕು ಕೇಂದ್ರದಲ್ಲಿ ಈ ಮೊದಲಿಗೆ 6 ತಾಲೂಕು ಪಂಚಾಯತ್ ಕ್ಷೇತ್ರಗಳಿದ್ದವು, ಸದ್ಯ ಸರಕಾರಕ್ಕೆ ಸಲ್ಲಿಸಿರುವ ಹೊಸ ಪ್ರಸ್ತಾವಣೆಯಲ್ಲಿ 6ರ ಬದಲಿಗೆ 11 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಏರಿಕೆ ಮಾಡಲಾಗಿದ್ದು, ಇದರಿಂದ ನಾಗರಾಳ ಎಸ್.ಪಿ., ಹಳದೂರ, ಕೋಟೆಕಲ್, ಕೆಲವಡಿ, ಮಂಗಳಗುಡ್ಡ, ಜಮ್ಮನಕಟ್ಟಿ, ಹಂಗರಗಿ, ಕಟಗೇರಿ, ಹುಲ್ಲಿಕೇರಿ ಎಸ್.ಪಿ., ಹಂಸನೂರ ಇವುಗಳನ್ನು ತಾಪಂ ಕ್ಷೇತ್ರಗಳಾಗಿ ರಚನೆ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಮಲ್ಲಿಕಾರ್ಜುನ ಕಲಕೇರಿ