ಗುಳೇದಗುಡ್ಡ: ಮನೀ, ಕಷ್ಟಪಟ್ಟ ಬೆಳೆದಿದ್ದ ಬೆಳಿ, ಹೋಲಾ ಎಲ್ಲ ನೀರಾಗ್ ಹೋಯ್ತು. ನಾವ್ ನೀರಾಗ್ ಹೋಗಿ ಬಿಟ್ಟಿದ್ರ ಚಲೋ ಇರತಿತ್ ನೋಡ್ರಿ. ಎಲ್ಲಾ ಕಳಕೊಂಡು ಇನ್ನೇನ್ ಮಾಡಬೇಕ್. ದೇವರ ಬಾಳ್ ಮೋಸ ಮಾಡಿದ. ನಾವ್ ಕಷ್ಟಪಟ್ಟ ಬೆಳೆದಿದ್ದು ನೀರ್ ಪಾಲಾಯ್ತು.
Advertisement
ಲಾಯದಗುಂದಿ ಗ್ರಾಮದ ನಿರಾಶ್ರಿತರ ನೋವಿನ ನುಡಿಗಳಿವು. ಕಳೆದ ವಾರ ನವಿಲುತೀರ್ಥ ಜಲಾಶಯದಿಂದ ಬಿಟ್ಟ ನೀರಿನಿಂದ ಲಾಯದಗುಂದಿ ಗ್ರಾಮಕ್ಕೆ ನೀರು ನುಗ್ಗಿ ಅಕ್ಷರಶಃ ನೀರಿನಲ್ಲಿ ಮುಳುಗಿ ಹೋಗಿತ್ತು. ಇಂದು ಆ ಪ್ರವಾಹಕ್ಕೆ ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರು ನೋವಿನಿಂದ ಹೇಳಿದ ಮಾತುಗಳು ನಿಜಕ್ಕೂ ಕಣ್ಣೀರು ತರಿಸುವಂತಿದ್ದವು. ಸಮಯ ಕಳೆದಂಗೆಲ್ಲಾ ನದಿ ನೀರ್ ಹೊಲಾ ದಾಟಿ ಊರೊಳಗ ನುಗ್ಗಿ, ಸುತ್ತವರದ ದಿಗ್ಬಂಧನ ಹಾಕಿ ನಮ್ಮನ್ನ ನಡುಗಡ್ಡೆಯಾಗಿ ಮಾಡಿಬಿಟ್ಟಾನ ಆ ದೇವರು ಎಂದು ಬೇಸರದಿಂದ ಹೇಳಿದ ನುಡಿಗಳು ಮನ ಕರಗುವಂತಿದ್ದವು. ಪ್ರವಾಹವೇನೋ ಇಳಿಮುಖವಾಯ್ತು. ಆದರೆ ಅದರಿಂದಾದ ಕಷ್ಟ-ನಷ್ಟವನ್ನು ಎದುರಿಸಿ, ಹೊಸ ಜೀವನ ಕಟ್ಟಿಕೊಳ್ಳುವುದೇ ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ ಗ್ರಾಮಸ್ಥರಿಗೆ ಮುಂದಿರುವ ದೊಡ್ಡ ಸವಾಲಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀರಿನಿಂದ ಆವರಿಸಿ, ಹಾಳಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
Related Articles
Advertisement
ಮನಿ ನೀರಾಗ್, ಕಷ್ಟಪಟ್ಟ ಬೆಳೆದಿದ್ದ ಬೆಳಿ, ಹೊಲಾ ಎಲ್ಲ ನೀರಾಗ್ ಹೋಯ್ತು. ಏನ್ ಹೇಳ್ಬೇಕ್ರಿ. ನಾವ್ ಎಲ್ಲ ಕಳಕೊಂಡು ಸಾಲ್ಯಾಗ್ ಬಂದ್ ಕುಂತೀವ್ರಿ. ಅವರಿವರ ದಾನಿಗಳು ಕೊಟ್ಟಿದ್ದು ತಿನ್ನಾಕತಿತೀವಿ. ಇನ್ನ ಈ ಶಾಲಿಯವರು ಹೋಗ್ ಅಂದ್ರ ಎಲ್ಲಿ ಹೋಗಬೇಕ್ರಿ. ನಮ್ಮ ಮನೆಗಳೆಲ್ಲ ನೀರಿನಿಂದ ತುಂಬಿ ಕುಸಿದು ಹೋಗ್ಯಾವ. ಬಿದ್ದ ಹೋಗ್ಯಾವ. ಹೊಲ್ದಾಗ ನೀರು ನಿಂತು ರಾಡಿ ತುಂಬೈತಿ. ಹೆಂಗ್ ಜೀವ್ನಾ ಕಟ್ಟಿಕೊಳ್ಳಬೇಕ್. ನಮ್ಗ ಸರಕಾರ ಏನಾದ್ರು ಸಹಾಯ ಮಾಡ್ಬೇಕು ಎನ್ನುತ್ತಾರೆ ಲಾಯದಗುಂದಿ ಗ್ರಾಮದ ನಿರಾಶ್ರಿತರಾದ ಮಾದೇವಿ ಸೀಮಿಕೇರಿ, ಸಂಗವ್ವ ಸಿಂಬಗಿ, ನೀಲವ್ವ ಸೀಮಿಕೇರಿ, ಲಕ್ಷ್ಮೀಬಾಯಿ ಕೋಚಲ, ರೇಣವ್ವ ಗುಡಗುಂಟಿ, ಮಲ್ಲವ್ವ ಚಿಲ್ಲಾಪುರ.