ಕಲಬುರಗಿ: ಕೊರೊನಾ ಕಾರಣದಿಂದ ವಿಳಂಬವಾಗಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸಲು ಗುಲಬರ್ಗಾ ವಿಶ್ವವಿದ್ಯಾಲಯ ಸಜ್ಜಾಗುತ್ತಿದ್ದು, 2020-21ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯನ್ನು ಸೆಮಿಸ್ಟರ್ ಪ್ರಕಾರವೇ ಎರಡು ಹಂತದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ ತಿಳಿಸಿದರು.
ಗುವಿವಿ ರಾಧಾಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020- 21ನೇ ಶೈಕ್ಷಣಿಕ ಸಾಲಿನ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಅಗತ್ಯ ಇದೆ. ಆದ್ದರಿಂದ ವಿವಿ ಮಟ್ಟದಲ್ಲಿ ತಾತ್ಕಾಲಿಕವಾದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯು ತ್ತಿದ್ದೇವೆ ಎಂದು ಹೇಳಿದರು.
ಪದವಿ ಹಂತದ 1, 3, 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ ಒಂದು ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಜುಲೈ 15ರಿಂದ ಆರಂಭಿಸಲಾಗುತ್ತದೆ. ಈ ಪರೀಕ್ಷೆಯನ್ನು 25 ದಿನಗಳಲ್ಲಿ ಮುಗಿಸಲಾಗುವುದು. ನಂತರದ 15 ದಿನಗಳಲ್ಲಿ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದರು. ಅದೇ ರೀತಿ ಪದವಿ ಹಂತದ 2, 4, 6ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆಯ ಫಲಿತಾಂಶ ನವೆಂಬರ್ 15ರೊಳಗೆ ಪ್ರಕಟಿಸಿ, 2020-21ನೇ ಸಾಲಿನ ಎಲ್ಲ ಪ್ರಕ್ರಿಯೆಗಳನ್ನು ಅಂತ್ಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಕೊರೊನಾ ಹಾವಳಿಯಿಂದ ಪರೀಕ್ಷೆಗಳು ವಿಳಂಬ ವಾಗಿವೆ. ಈಗಾಗಲೇ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಈಗ ಅವರೆಲ್ಲರೂ ಮುಂದಿನ ಸೆಮಿಸ್ಟರ್‌ನ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಎಲ್ಲ ವಿದ್ಯಾರ್ಥಿಗಳ ಭವಿಷ್ಯದ ಉದ್ದೇಶದಿಂದ ಎರಡೂ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಕುಲಪತಿಗಳು ಸ್ಪಷ್ಟಪಡಿಸಿದರು. ಈಗಾಗಲೇ ನಾವು ಮುಂದಿನ ಸೆಮಿಸ್ಟರ್‌ಗೆ ಹೋಗಿ ದ್ದರಿಂದ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆ ಬರೆಯಲು ಕಷ್ಟ ವಾಗುತ್ತದೆ. ಹೀಗಾಗಿ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಡಬೇಕೆಂದು ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬಂದಿದೆ.
ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಾಗಿದ್ದರಿಂದ ಅವರಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಎರಡು ಅಥವಾ ಮೂರು ವಾರಗಳ ತರಗತಿಗಳನ್ನು ಹಮ್ಮಿಕೊಳ್ಳಲಾಗುವುದು. ಈ ಮೂಲಕ ಹಿಂದಿನ ಪಠ್ಯಕ್ರಮದ ಗೊಂದಲ ಬಗೆಹರಿಸಿ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸ ಶೈಕ್ಷಣಿಕ ವರ್ಷ: 2020-21ನೇ ಶೈಕ್ಷಣಿಕ ಸಾಲಿನ ಪರೀಕ್ಷೆಗಳನ್ನು ಮುಗಿಸಿ, 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಸಜ್ಜು ಮಾಡಿಕೊಳ್ಳಲಾಗುತ್ತಿದೆ. ಕೆಲವು ವಿಶ್ವವಿದ್ಯಾಲಯಗಳು ಅಕ್ಟೋಬರ್ ಮೊದಲ ವಾರದಲ್ಲಿ ಹೊಸ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯ ನವೆಂಬರ್ 15ರ ವೇಳೆ ತನ್ನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಅನುದಾನ ಬಳಕೆ ವಿವರ: ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಗುವಿವಿಗೆ ರೂಸಾ ಅನುದಾನದಲ್ಲಿ 20 ಕೋಟಿ ರೂ. ಅನುದಾನ ಬಂದಿತ್ತು. ಇದರಲ್ಲಿ ಶೇ.80ರಷ್ಟು ಅನುದಾನ ಬಳಸಿಕೊಳ್ಳಲಾಗಿದೆ ಕುಲಪತಿಗಳು ಮಾಹಿತಿ ನೀಡಿದರು. ರೂಸಾ ಅನುದಾನದಲ್ಲಿ ಪರಿಸರ ವಿಜ್ಞಾನ ವಿಭಾಗದ ಕಟ್ಟಡ ಪೂರ್ಣವಾಗಿದೆ. ಮಹಿಳಾ ವಸತಿ ನಿಲಯ, ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಕೇಂದ್ರದ ಕಟ್ಟಡಗಳು ಉದ್ಘಾಟನೆಗೆ ಸಿದ್ಧವಾಗಿವೆ.
ಜತೆಗೆ ವರ್ಚುವಲ್ ಲೈಬ್ರರಿ ಪುನೆcàತನಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಒಂದು ಕೋಟಿ ರೂ. ಬಿಡುಗಡೆಯಾಗಿದೆ. ಕೌಶಲ ಹಾಗೂ ಔದ್ಯೋಗಿಕ ಆಧಾರಿತ ಚಟುವಟಿಕೆಗಳಿಗಾಗಿ ಕೆಕೆಆರ್‌ಡಿಬಿಯಿಂದ ಐದು ಕೋಟಿ ಅನುದಾನ ನೀಡುವಂತೆ ಪ್ರಸ್ತಾವವೆ ಸಲ್ಲಿಸಲಾಗಿದೆ ಎಂದರು.