ಕಲಬುರಗಿ: ಗುಲಬರ್ಗಾ ವಿವಿ 37ನೇ ಘಟಿಕೋತ್ಸವದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಮಾನವ ಧರ್ಮ ಪೀಠದ ಅಧ್ಯಕ್ಷ, ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೀದರ್ ಚಿದಂಬರಾಶ್ರಮ ಸಿದ್ಧಾ ರೂಢ ಮಠದ ಶಿವ ಕುಮಾರ ಮಹಾಸ್ವಾಮೀಜಿ, ಸಂಗೀತ ಕ್ಷೇತ್ರ ದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪಂ. ವೀರಭದ್ರಪ್ಪ ಗಾದಗೆ ಅವರಿಗೆ ಗೌರವ ಡಾಕ್ಟ ರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.
ಜ್ಞಾನಗಂಗಾ ಆವರಣದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಕುಲಪತಿ ಪ್ರೊ| ಎಸ್.ಆರ್. ನಿರಂಜನ್ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಘಟಿಕೋತ್ಸವ ಭಾಷಣ ಮಾಡಿದ ಮೈಸೂರಿನ ಅಂತಾರಾಷ್ಟ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ, ಅಂ.ರಾ. ಪೌಷ್ಠಿಕ ವಿಜ್ಞಾನ ಒಕ್ಕೂಟ ಉಪಾಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ| ವಿ.ಪ್ರಕಾಶ, ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತಮ ವಾತಾವರಣವಿದೆ. ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸ ಮಾಡಲು
ಕರ್ನಾಟಕಕ್ಕೆ ಹೋಗಿ ಎಂದು ಪ್ರೋತ್ಸಾಹಿಸು ವುದನ್ನು ನಾವು ಕಾಣಬಹುದಾಗಿದೆ ಎಂದರು.
ಘಟಿಕೋತ್ಸವದಲ್ಲಿ ಒಟ್ಟು 29,183 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಪ್ರಸಕ್ತ ವರ್ಷ ಚಿನ್ನದ ಪದಕ ಮತ್ತು ವಿವಿಧ ಪದವಿಗಳನ್ನು ಪಡೆಯುವಲ್ಲಿ ಮಹಿಳೆಯರೇ ಪ್ರಾಬಲ್ಯ ಸಾಧಿಸಿದ್ದಾರೆ. 171 ಚಿನ್ನದ ಪದಕಗಳಲ್ಲಿ 160 ಚಿನ್ನದ ಪದಕಗಳನ್ನು 85 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಇದರಲ್ಲಿ 52 ವಿದ್ಯಾರ್ಥಿನಿಯರು ಹಾಗೂ 24 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. 28,861 ಸ್ನಾತಕ, ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಪದವಿಗಳಲ್ಲಿ 15,114 ವಿದ್ಯಾರ್ಥಿನಿಯರು ಹಾಗೂ 13,727 ವಿದ್ಯಾರ್ಥಿಗಳು ಪದವಿ ಪಡೆದರು.