ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳಿಸದ ಕಾರಣ “ಗುಲಬರ್ಗಾ ಟೆಕ್ಸ್‌ಟೈಲ್ ಪಾರ್ಕ್’ ಯೋಜನೆ ರದ್ದುಗೊಳಿಸಿದೆ.
ನಗರದ ನಂದೂರು-ಕೆಸರಟಗಿ ಕೈಗಾರಿಕಾ ವಸಾಹತು ಪ್ರದೇಶದ ಬಳಿ “ಗುಲಬರ್ಗಾ ಟೆಕ್ಸ್‌ಟೈಲ್ ಪಾರ್ಕ್’ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. 50 ಎಕರೆ ಭೂ ಪ್ರದೇಶದಲ್ಲಿ ಒಟ್ಟು 52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉದ್ಯಮಿಗಳ ಪಾಲುದಾರಿಕೆ ಹಾಗೂ ಸಾಲದಲ್ಲಿ ಪಾರ್ಕ್ ತಲೆ ಎತ್ತಬೇಕಿತ್ತು. 100 ಘಟಕಗಳು ಸ್ಥಾಪನೆಯಾಗಿ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿತ್ತು.
2011ರಲ್ಲಿ ಕೇಂದ್ರ ಸರ್ಕಾರ “ಸಂಯೋಜಿತ ಟೆಕ್ಸ್‌ಟೈಲ್ ಪಾರ್ಕ್ ಯೋಜನೆ’ (ಎಸ್ ಐಟಿಪಿ)ಯಡಿ ಅನುಮತಿ ನೀಡಿ 18.56 ಕೋಟಿ ರೂ. ಅನುದಾನ ಒದಗಿಸಲು ಮುಂದೆ ಬಂದಿತ್ತು. ತನ್ನ ಪಾಲಿನಲ್ಲಿ 1.85 ಕೋಟಿ ರೂ. ಅನುದಾನವನ್ನೂ ಕೇಂದ್ರ ಬಿಡುಗಡೆ ಮಾಡಿತ್ತು. 2015ರ ಡಿಸೆಂಬರ್ ತಿಂಗಳೊಳಗೆ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ನಿಗದಿತ ಅವಧಿ ಮುಗಿದು ಐದು ವರ್ಷಗಳಾದರೂ ಉದ್ದೇಶಿತ ಯೋಜನೆ ಒಂದಿಂಚು ಅಭಿವೃದ್ಧಿ ಕಂಡಿಲ್ಲ. ಆದ್ದರಿಂದ ಯೋಜನೆ ರದ್ದುಗೊಳಿಸಲು ನಿರ್ಣಯ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಸಾಂಧರ್ಬಿಕ ಚಿತ್ರ
68 ದಿನಗಳ ಹಿಂದೆಯೇ ರದ್ದು: “ಗುಲಬರ್ಗಾ ಟೆಕ್ಸ್‌ಟೈಲ್ ಪಾರ್ಕ್’ ರದ್ದುಗೊಂಡು 68 ದಿನಗಳೇ ಕಳೆದಿವೆ. ಅಚ್ಚರಿ ಎಂದರೆ ಎರಡು ತಿಂಗಳಾದರೂ ಇದು ಬೆಳಕಿಗೆ ಬಂದಿಲ್ಲ. ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ಯೋಜನೆ ಬಗ್ಗೆ ಎತ್ತಿದ ಪ್ರಶ್ನೆಗೆ ಫೆ.6ರಂದು ನೇರವಾಗಿ ಯೋಜನೆ ರದ್ಧತಿ ಉತ್ತರ ಸಿಕ್ಕಿದೆ. ಗುಲಬರ್ಗಾ ಟೆಕ್ಸ್‌ಟೈಲ್ ಪಾರ್ಕ್ ಯಾವಾಗ ಮಂಜೂರು ಮಾಡಲಾಯಿತು? ಯೋಜನೆ ವಿಳಂಬಕ್ಕೆ ಕಾರಣಗಳೇನು? 100 ಘಟಕಗಳು ಸ್ಥಾಪನೆಯಾಗಲಿವೆ ಎಂಬುದು ಸತ್ಯವೇ? ಮತ್ತು ಯೋಜನೆ ಪೂರ್ಣವಾದರೆ ಎಷ್ಟು ಜನ ಉದ್ಯೋಗ ಗಳಿಸಬಹುದು? ಎಂದು ನಿರ್ದಿಷ್ಟ ಪ್ರಶ್ನೆಗಳನ್ನು ಕೆ.ಸಿ.ರಾಮಮೂರ್ತಿ ಕೇಳಿದ್ದರು. ಇದಕ್ಕೆ ಕೇಂದ್ರ ಟೆಕ್ಸ್‌ಟೈಲ್ ಸಚಿವಾಲಯ ಲಿಖೀತ ಉತ್ತರ ನೀಡಿದ್ದು, ಅನೇಕ ವರ್ಷಗಳಿಂದ ಪಾರ್ಕ್ ಪ್ರಗತಿಯಾಗಿಲ್ಲ ಹಾಗೂ ಉದ್ಯಮಗಳ ಸ್ಥಾಪನೆಗೆ ಉದ್ಯಮಗಳಿಂದ ಬಂಡವಾಳ ಹರಿದು ಬಂದಿಲ್ಲ. ಹೀಗಾಗಿ ಕೇಂದ್ರ ಟೆಕ್ಸ್‌ಟೈಲ್ ಸಚಿವಾಲಯ ಅನೇಕ ಪ್ರಗತಿ ಪರಿಶೀಲನಾ ಸಭೆ ನಡೆಸಿ 2019ರ ಡಿ.3ರಂದು ನಡೆದ ಯೋಜನೆ ಅನುಮೋದನೆ ಸಮಿತಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಅನ್ನು ರದ್ದುಗೊಳಿಸುವ ನಿರ್ಣಯ ಕೈಗೊಂಡಿದೆ ಎಂದು ಲಿಖೀತ ಉತ್ತರ ನೀಡಲಾಗಿದೆ.
“ಗುಲಬರ್ಗಾ ಟೆಕ್ಸ್‌ಟೈಲ್ ಪಾರ್ಕ್’ ಪ್ರಗತಿ ಕಾಣದಿರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಪ್ರಮುಖ ಕಾರಣ. ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಜವಳಿ ಉದ್ಯಮವನ್ನೇ ನಾಶಗೊಳಿಸಲು ಹೊರಟಿದೆ. ರಾಜ್ಯ ಸರ್ಕಾರ ಪಾರ್ಕ್ ರದ್ಧತಿಯ ನಿರ್ಣಯ ಮರು ಪರಿಶೀಲಿಸುವಂತೆ ಕೇಂದ್ರದ ಮೇಲೆ ಒತ್ತಡ ತಂದು ಅದನ್ನು ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಬೇಕು.
–ವಿಜಯ ಪಟ್ಟೇದಾರ, ಉದ್ದೇಶಿತ ಟೆಕ್ಸ್‌ಟೈಲ್ ಪಾರ್ಕ್ ಸದಸ್ಯ