ಬೆಂಗಳೂರು: ಹಿರಿಯ ಸಂಶೋಧಕ ಡಾ| ಎಂ.ಎಂ.ಕಲ್ಬುರ್ಗಿ ಕೊಲೆ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಹೆಚ್ಚುವರಿ ಪೊಲೀಸ್ ನಿರ್ದೇಶಕ ಸಿ.ಎಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ಕೆಲವರನ್ನು ಬಿಜಾಪುರದಲ್ಲಿ ಸಿಐಡಿ ವಶಕ್ಕೆ ಪಡೆದಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ
ಮಂಗಳವಾರ “ಉದಯವಾಣಿ’ ಜತೆ ಮಾತನಾಡಿದ ಎಡಿಜಿಪಿ, ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆಸ್ತಿ ವಿಚಾರವಾಗಿ ಹತ್ಯೆ ನಡೆದಿದೆಯಾ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಹತ್ಯೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ತನಿಖೆ ಮುಂದುವರೆದಿದ್ದು, ಬಹಳ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಪ್ರತಿ ಹಂತದಲ್ಲೂ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.