ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರತೆ ಪಡೆಯುತ್ತಿದ್ದು, ಸೋಮವಾರ ಸಂಜೆ ವೇಳೆಗೆ ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯೇ ಈ ಮಾಹಿತಿ ನೀಡಿದೆ.
ರವಿವಾರ ಅಪ್ಪಳಿಸಲಿರುವ “ಗುಲಾಬ್’ ಚಂಡಮಾರುತವು 2018ರಲ್ಲಿ ಒಡಿಶಾದಲ್ಲಿ ಅಬ್ಬರಿಸಿದ “ತಿತ್ಲಿ’ ಚಂಡಮಾರುತದಷ್ಟೇ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಭಾರೀ ಮಳೆ: ಗುಲಾಬ್ ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾ, ಆಂಧ್ರದಲ್ಲಿ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಸೆ.26ರ ಸಂಜೆ ವೇಳೆಗೆ ಚಂಡಮಾರುತವು ವಿಶಾಖಪಟ್ಟಣ ಮತ್ತು ಗೋಪಾಲಪುರದ ಮಧ್ಯೆ ಅಂದರೆ ಕಾಳಿಂಗಪಟ್ಟಣಂನಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. ಇದರಿಂದಾಗಿ ಈ ಎರಡು ರಾಜ್ಯಗಳಲ್ಲದೇ ಪಶ್ಚಿಮ ಬಂಗಾಲ, ತೆಲಂಗಾಣ, ಛತ್ತೀಸ್‌ಗಢಗಳ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಎಚ್ಚರಿಸಿದೆ.
ಮತ್ತೂಂದೆಡೆ, ಮ್ಯಾನ್ಮಾರ್ ಕರಾವಳಿಯಲ್ಲೂ ವಾಯುಭಾರ ಕುಸಿತ ಆರಂಭವಾಗಿದ್ದು, ಇದರ ಪರಿಣಾಮವೆಂಬಂತೆ ಪಶ್ಚಿಮ ಬಂಗಾಲದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
7 ಜಿಲ್ಲೆಗಳಲ್ಲಿ ಹೈಅಲರ್ಟ್
ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು 7 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದೆ. ತಗ್ಗುಪ್ರದೇಶಗಳಲ್ಲಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯವೂ ಆರಂಭವಾಗಿದ್ದು, ರಕ್ಷಣೆ ಹಾಗೂ ಪರಿಹಾರ ತಂಡಗಳನ್ನೂ ನಿಯೋಜಿಸಲಾಗಿದೆ. ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆಯ 42 ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ 24 ತಂಡಗಳು ಹಾಗೂ ಅಗ್ನಿಶಾಮಕ ಸಿಬಂದಿಯನ್ನು ಈ 7 ಜಿಲ್ಲೆಗಳಿಗೆ ರವಾನಿಸಲಾಗಿದೆ.