Advertisement

ಪ್ರವಾಸಿ ತಾಣವಾಗಿ ಜನಾಕರ್ಷಣೆ ಪಡೆದ ಗುಜ್ಜರಕರೆ !

07:38 PM Mar 03, 2022 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ಪುರಾತನ ಗುಜ್ಜರಕೆರೆ ಅಭಿವೃದ್ಧಿಗೊಂಡಿದ್ದು, ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಂಡಿದ್ದು, ಕೆರೆ ಸಹಿತ ಸುತ್ತಲಿನ ಆಹ್ಲಾದಕರ ಪರಿಸರ ವೀಕ್ಷಣೆಗೆ ದಿನಂಪ್ರತಿ ನೂರಾರು ಮಂದಿ ಗುಜ್ಜರಕೆರೆಯತ್ತ ಆಗಮಿಸುತ್ತಿದ್ದಾರೆ.

Advertisement

ಗುಜ್ಜರಕೆರೆ ಕೆಲವು ದಿನಗಳ ಹಿಂದೆಯಷ್ಟೇ ಉದ್ಘಾ ಟನೆಗೊಂಡಿದ್ದು, ಕೆರೆಯ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣಗೊಂಡಿದೆ. ಬೆಳಗ್ಗೆ, ಸಂಜೆ ಸುತ್ತಲಿನ ಮಂದಿ ವಾಕಿಂಗ್‌ಗೆಂದು ಆಗಮಿಸುತ್ತಿದ್ದು, ಮಕ್ಕಳ ಆಟಕ್ಕೆಂದು ಪ್ರತ್ಯೇಕ ಜಾಗವಿದೆ. ಕೆರೆಯ ಸುತ್ತಲಿನ ಮೆಟ್ಟಿಲುಗಳನ್ನು ಪುನಃರಚಿಸಿ ಕೆರೆಯನ್ನು ಸಂರಕ್ಷಿಸಲಾಗಿದೆ. ಕೆರೆಯ ಸುತ್ತ ವಿಶ್ರಾಂತಿ ಸ್ಥಳ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷೆಗಾಗಿ ರೈಲಿಂಗ್‌ ಅಳವಡಿಸಲಾಗಿದೆ. ವಿಹಾರಿಗಳಿಗೆ ಸುಸಜ್ಜಿತ ಫುಟ್‌ಪಾತ್‌ ನಿರ್ಮಾಣ, ಅಲಂಕಾರಿಕ ವಿದ್ಯುತ್‌ ದೀಪ, ಸಾರ್ವಜನಿಕರ ಉಪಯೋಗಕ್ಕೆ ಜಿಮ್‌ ನಿರ್ಮಿಸಲಾಗಿದೆ.

ನಿರೀಕ್ಷೆ ಬಹಳಷ್ಟಿದೆ :

ಗುಜ್ಜರಕೆರೆ ಅಭಿವೃದ್ಧಿಯಾಗಬೇಕು ಎಂಬುದು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆ. ಇಪ್ಪತ್ತು ವರ್ಷಗಳಲ್ಲಿ ಈ ಕೆರೆ ಕಾಮಗಾರಿಗೆಂದು ಸುಮಾರು 6 ಕೋಟಿ ರೂ.ಗೂ ಹೆಚ್ಚಿನ ಹಣ ವ್ಯಯಿಸಲಾಗಿತ್ತು. ಆದರೆ ಕೆರೆಯಿಂದ ಶುದ್ಧ ನೀರು ಸಾರ್ವಜನಿಕರಿಗೆ ದೊರಕಲಿಲ್ಲ. ಕೊನೆಗೂ ಸ್ಮಾರ್ಟ್‌ಸಿಟಿ ಮುಖೇನ ಕೆರೆ ಅಭಿವೃದ್ಧಿಯತ್ತ ಮುಖಮಾಡಿದ್ದು, ಇದೀಗ ಈ ಕೆರೆಯ ಮೇಲೆ ಸಾರ್ವಜನಿಕರಿಗೆ ನಿರೀಕ್ಷೆ ಬಹಳಷ್ಟಿದೆ.

ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ಗುಜ್ಜರಕೆರೆ ಅಭಿವೃದ್ಧಿಗೊಂಡಿದ್ದು, ಜನಾಕರ್ಷಣೆ ಪಡೆಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕು. ಈ ಕೆರೆಯಿಂದ ಮಂಗಳೂರಿನ ಕುಡಿಯುವ ನೀರಿನ ಬವಣೆ ತೀರಬೇಕು. ದೇವರಿಗೆ ತೀರ್ಥ ಕೆರೆಯಾಗಿ ಮಾರ್ಪಾಡಬೇಕು’ ಎನ್ನುತ್ತಾರೆ.

Advertisement

ಬೋಟಿಂಗ್‌, ಕಾರಂಜಿ ಆಕರ್ಷಣೆ :

ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗುಜ್ಜರಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ, ಕಾರಂಜಿ ನಿರ್ಮಿಸಲು ಮಾತುಕತೆ ನಡೆಯುತ್ತಿದೆ. ಯಾವ ರೀತಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬಹುದು ಎಂಬ ಬಗ್ಗೆ ಸ್ಥಳೀಯರ ಅಭಿಪ್ರಾಯವನ್ನೂ ಪಡೆಯಲು ನಿರ್ಧ ರಿಸಲಾಗಿದೆ. ಕಾರಂಜಿ ಅಳವಡಿಸುವ ನಿಟ್ಟಿನಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಕೆರೆಯ ಅಭಿವೃದ್ಧಿಯ ಬಳಿಕ ಮುಂಬರುವ ದಿನಗಳಲ್ಲಿ ಸಮರ್ಪಕ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ :

ಇತಿಹಾಸ ಪ್ರಸಿದ್ಧ ಪುರಾಣ ಗುಜ್ಜರಕೆರೆ ಈ ಹಿಂದೆ ಅವ್ಯವಸ್ಥೆಯಿಂದ ಕೂಡಿತ್ತು. ಸದ್ಯ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಮುಖೇನ ಅಭಿವೃದ್ಧಿಗೊಳಿಸಲಾಗಿದೆ. ಗುಜ್ಜಕೆರೆಯು ದೇವರ ಕೆರೆ ಮಾತ್ರವಲ್ಲದೆ, ಪ್ರವಾಸಿ ತಾಣವಾಗಿಯೂ ಮಾರ್ಪಾಡಾಗಿದೆ. ವಾಕಿಂಗ್‌ ಮಾಡುವವರು ಸೇರಿದಂತೆ ಸುತ್ತಮುತ್ತಲಿನ ಮಂದಿ ದಿನಂಪ್ರತಿ ಆಗಮಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಮೂಲ ಸೌಕರ್ಯಕ್ಕೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸುಮಾರು 15 ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳ ಮತ್ತಷ್ಟು ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.-ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next