Advertisement

ಗುಜ್ಜಾಡಿ : ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗದ ಸಮಸ್ಯೆ

09:03 PM Dec 01, 2019 | Sriram |

ವಿಶೇಷ ವರದಿ-ಗಂಗೊಳ್ಳಿ: ತ್ಯಾಜ್ಯ ವಿಲೇವಾರಿ ಈಗ ಎಲ್ಲ ಗ್ರಾಮ ಪಂಚಾಯತ್‌ನ ಬಹುದೊಡ್ಡ ಸವಾಲಾಗಿದ್ದು, ಅದಕ್ಕಾಗಿ ಎಲ್ಲ ಪಂಚಾಯತ್‌ಗಳು ಕೂಡ ಘನ ತ್ಯಾಜ್ಯ ವಿಲೇವಾರಿಗಳನ್ನು ಆರಂಭಿಸುತ್ತಿದೆ. ಇದಕ್ಕೆ ಜಿ.ಪಂ.ನಿಂದಲೂ ಅನುದಾನ ಸಿಗುತ್ತದೆ. ಆದರೆ ಗುಜ್ಜಾಡಿ ಗ್ರಾಮಕ್ಕೆ ಅನುದಾನ ಇದ್ದರೂ, ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಜಾಗದ ಸಮಸ್ಯೆ ತಲೆದೋರಿದೆ. ಇದರಿಂದ ಈಗ ಕಸ ವಿಲೇವಾರಿಯೇ ತಲೆನೋವಾಗಿ ಪರಿಣಮಿಸಿದೆ.

Advertisement

ತಮ್ಮದೇ ಪಂಚಾಯತ್‌ ವ್ಯಾಪ್ತಿಯಲ್ಲಿಯೇ ಇರುವ ರಾಜ್ಯ ಗೇರು ಅಭಿವೃದ್ಧಿ ನಿಗಮದ ನೂರಾರು ಎಕ್ರೆ ಜಾಗದಲ್ಲಿ 10 ಸೆಂಟ್ಸ್‌ ಜಾಗ ನೀಡಲು ಡಿಸಿ, ಜಿ.ಪಂ.ಗೆ ಪತ್ರ ಬರೆದಿದ್ದರೂ, ಈವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನುವುದಾಗಿ ಪಂಚಾಯತ್‌ ಆರೋಪಿಸಿದೆ.

ಗ್ರಾ.ಪಂ.ಗಳಿಗೆ ಅಲ್ಲಿನ ಜನಸಂಖ್ಯೆ, ಆದಾಯಕ್ಕೆ ಅನುಗುಣವಾಗಿ ಜಿ.ಪಂ.ನಿಂದ ಸ್ವತ್ಛ ಗ್ರಾಮ, ಸ್ವತ್ಛ ಭಾರತ್‌ ಯೋಜನೆಯಡಿ ಪ್ರತ್ಯೇಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು 20 ಲಕ್ಷ ರೂ. ಅನುದಾನ ನೀಡುತ್ತಿದೆ.

ರಸ್ತೆ ಬದಿ ಕಸ ರಾಶಿ
ಪಂಚಾಯತ್‌ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಮರ್ಪಕವಾದ ವ್ಯವಸ್ಥೆಯಿಲ್ಲದ ಕಾರಣ ಗ್ರಾಮಸ್ಥರು ಹಾಗೂ ಹೊರಗಿನಿಂದ ಬರುವ ಜನರು ಮುಳ್ಳಿಕಟ್ಟೆ- ನಾಯಕವಾಡಿ ರಸ್ತೆ, ತ್ರಾಸಿ – ನಾಯಕವಾಡಿ ರಸ್ತೆ ಹಾಗೂ ಗಂಗೊಳ್ಳಿ – ತ್ರಾಸಿ ರಸ್ತೆಗಳ ಎರಡೂ ಬದಿಗಳು, ಚರಂಡಿಗಳಿಗೆ ಕಸ ಎಸೆಯುತ್ತಿದ್ದಾರೆ. ಕೇವಲ ಗುಜ್ಜಾಡಿ ಗ್ರಾಮದ ಜನರು ಮಾತ್ರವಲ್ಲದೆ ಗಂಗೊಳ್ಳಿ ಹಾಗೂ ಇನ್ನಿತರ ಕಡೆಗಳಿಂದ ವಾಹನಗಳಲ್ಲಿ ರಾತ್ರಿ ವೇಳೆ ಬಂದು ಕಸ ಎಸೆದು ಹೋಗುತ್ತಿದ್ದಾರೆ.

ವಿಲೇವಾರಿ ಘಟಕಕ್ಕೆ ಆಗ್ರಹ
ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅನೇಕ ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ನ ಅನುದಾನದ ನೆರವಿನಿಂದ ಕಸ ವಿಲೇವಾರಿ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದೆ. ಕಸ ವಿಲೇವಾರಿ ಜತೆಗೆ, ಅದನ್ನು ಗೊಬ್ಬರವಾಗಿ ಪರಿವರ್ತಿಸಿದರೆ ಪಂಚಾಯತ್‌ ಗೂ ಆದಾಯ ಬರುತ್ತದೆ. ಗುಜ್ಜಾಡಿಯಲ್ಲೂ ಘಟಕ ಆರಂಭಿಸಲಿ ಎಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

Advertisement

ಜಾಗ ಒದಗಿಸಲಿ
ಗುಜ್ಜಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಜಾಗದ ಸಮಸ್ಯೆಯಿದೆ. ಈ ಬಗ್ಗೆ ಪಂಚಾಯತ್‌ನಿಂದ ಕಳೆದ 5- 6 ವರ್ಷಗಳಿಂದಲೂ ಪ್ರಯತ್ನಿಸಲಾಗುತ್ತಿದೆ. ಪಂಚಾಯತ್‌ನಿಂದ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳು, ಜಿ.ಪಂ.ಗೂ ಕೂಡ ಪತ್ರ ಬರೆಯಲಾಗಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ರಾಜ್ಯ ಗೇರು ಅಭಿವೃದ್ಧಿ ನಿಗಮದ ನೂರಾರು ಎಕ್ರೆಗಳ ಪೈಕಿ 10 ಸೆಂಟ್ಸ್‌ ಜಾಗವನ್ನು ಒದಗಿಸಲಿ. ರಸ್ತೆ ಬದಿ ಕಸ ಎಸೆಯದಂತೆ ಸಿಸಿಟಿವಿಯೂ ಹಾಕಲಾಗಿದೆ. ಗ್ರಾಮಸ್ಥರು ಮಾತ್ರವಲ್ಲದೆ ಹೊರಗಿನವರು ಬಂದು ಎಸೆಯುತ್ತಿದ್ದಾರೆ. ನಾವು ಜೆಸಿಬಿ ಬಳಸಿ ಸ್ವತ್ಛ ಮಾಡಿದರೂ,ಕೆಲ ದಿನಗಳಲ್ಲಿ ಮತ್ತೆ ಕಸದ ರಾಶಿಯೇ ಇರುತ್ತದೆ.
– ತಮ್ಮಯ್ಯ ದೇವಾಡಿಗ,ಗ್ರಾ.ಪಂ.ಅಧ್ಯಕ್ಷರು,ಗುಜ್ಜಾಡಿ

ಕಂದಾಯ ಇಲಾಖೆಗೆ ಪತ್ರ
ಜಾಗ ಹುಡುಕಿ ಕೊಡಲು ಪಂಚಾಯತ್‌ನಿಂದ ಕಂದಾಯ ಇಲಾಖೆಗೆ ಪತ್ರ ಬರೆಯಲು ಸೂಚಿಸಿದ್ದೇವೆ. ಗೇರು ನಿಗಮದ ಜಾಗ ಲೀಸ್‌ಗೆ ಕೊಟ್ಟಿರುವುದರಿಂದ ಆ ಜಾಗ ಸಿಗುವುದು ಕಷ್ಟ. ಇದಲ್ಲದೆ ಕೆಲವೆಡೆಗಳಲ್ಲಿ ಮಾಡಿದಂತೆ ಅಕ್ಕ- ಪಕ್ಕದ ಗ್ರಾ.ಪಂ.ಗಳು ಒಪ್ಪಿದರೆ ಅವರೊಂದಿಗೆ ಸೇರಿ ಒಟ್ಟಿಗೆ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಅವಕಾಶವಿದೆ. ಹೊಸಾಡು -ತ್ರಾಸಿ ಅಥವಾ ಮರವಂತೆ ಗ್ರಾ.ಪಂ.ಗಳೊಂದಿಗೆ ಅವರು ಒಪ್ಪಿದಲ್ಲಿ ಒಟ್ಟು ಸೇರಿ ಮಾಡಬಹುದು.
– ಶ್ರೀನಿವಾಸ ರಾವ್‌,ಯೋಜನಾಧಿಕಾರಿ,ಉಡುಪಿ ಜಿ.ಪಂ.

ಎಷ್ಟು ಮನೆಗಳಿವೆ?
ಗುಜ್ಜಾಡಿ ಗ್ರಾ.ಪಂ.ನಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್‌ ಹಾಗೂ ಬೆಣೆYರೆ ಒಟ್ಟು 5 ವಾರ್ಡ್‌ಗಳಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 6,042 ಜನರಿದ್ದು, ಮನೆಗಳು, ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 1,300ಕ್ಕೂ ಹೆಚ್ಚು ಕಟ್ಟಡಗಳಿವೆ.

ಎಷ್ಟು ಗ್ರಾ.ಪಂ.ಗಳಲ್ಲಿ ಇದೆ?
ಉಡುಪಿ ಜಿಲ್ಲೆಯಲ್ಲಿ ಒಟ್ಟು 158 ಗ್ರಾ.ಪಂ.ಗಳಿದ್ದು, ಈ ಪೈಕಿ ಈವರೆಗೆ ಕುಂದಾಪುರ ತಾಲೂಕಿನ ವಂಡ್ಸೆ, ಹೊಸಾಡು – ತ್ರಾಸಿ ಸೇರಿದಂತೆ ಒಟ್ಟು 54 ಗ್ರಾ.ಪಂ.ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಲಾಗಿದೆ. ಇದರಲ್ಲಿ ಕೆಲವು ಗ್ರಾ.ಪಂ.ಗಳು ಸಮೀಪದ ಪಂಚಾಯತ್‌ಗಳೊಂದಿಗೆ ಜಂಟಿಯಾಗಿ ಘಟಕದ ನಿರ್ವಹಣೆಯನ್ನು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next