Advertisement

ಗುಜ್ಜಾಡಿ ಸರಕಾರಿ ಹಿ. ಪ್ರಾ. ಶಾಲೆ; ಶತಕ ದಾಟಿದ ದಾಖಲಾತಿ: ಬೇಕಿದೆ ಅಗತ್ಯ ಸೌಲಭ್ಯ

08:11 PM Sep 23, 2021 | Team Udayavani |

ಗುಜ್ಜಾಡಿ: ಶತಮಾನೋತ್ಸವ ಪೂರೈಸಿದ ಗುಜ್ಜಾಡಿಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿಗ ಮಕ್ಕಳದ್ದೇ ಕಲರವ. ಈ ಶಾಲೆ ದಾಖಲಾತಿಯಲ್ಲಿ ಸತತ ಎರಡು ವರ್ಷ ಶತಕದ ದಾಖಲೆ ನಿರ್ಮಿಸಿದೆ. ಬೈಂದೂರು ವಲಯದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಗುಜ್ಜಾಡಿಗೆ ಕೆಲವೊಂದು ಸೌಕರ್ಯಗಳಿದ್ದರೂ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ಸೌಲಭ್ಯಗಳು ಅಗತ್ಯ ಇವೆ.

Advertisement

1919ರಲ್ಲಿ ಗುಜ್ಜಾಡಿಯ ಪುಟ್ಟ ಊರಿನಲ್ಲಿ ದಿ| ಶಾಬುದ್ದೀನ್‌ ಅಬ್ದುಲ್‌ ಖಾದಿರ್‌ ಮಾಸ್ತರ್‌ (ಮೊದಲ ಮುಖ್ಯೋಪಾಧ್ಯಾಯರು) ಅವರಿಂದ ಆರಂಭಗೊಂಡ ಶಾಲೆಯಿದು. ಯಶಸ್ವಿ 102 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿಗ 1ರಿಂದ 8ನೇ ತರಗತಿಯವರೆಗೆ 366, ಎಲ್‌ಕೆಜಿ, ಯುಕೆಜಿಯಲ್ಲಿ 60 ಮಕ್ಕಳು ಸೇರಿದಂತೆ ಒಟ್ಟಾರೆ 426 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ವರ್ಷ 325 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದರು.

ನೂರರ ಗಡಿ ದಾಟಿದ ದಾಖಲಾತಿ:

ನೂರು ವರ್ಷ ಪೂರೈಸಿದ ಅನಂತರದ 2 ವರ್ಷಗಳ ಲ್ಲಿಯೂ ದಾಖಲಾತಿ ಶತಕದ ದಾಟಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ. ಕಳೆದ ವರ್ಷ 102 ಮಕ್ಕಳು ಸೇರ್ಪಡೆ ಯಾಗಿದ್ದರೆ, ಈ ವರ್ಷ ಈ ಶಾಲೆಗೆ 103 ಮಂದಿ ಹೊಸದಾಗಿ ಸೇರಿದ್ದಾರೆ. ಈ ಪೈಕಿ 1ನೇ ತರಗತಿಗೆ 66 ಮಕ್ಕಳ ದಾಖಲಾತಿಯಾಗಿದೆ.

ದಾನಿಗಳ ನೆರವು:

Advertisement

ಗಣಪತಿ ಮೇಸ್ತ-ಸಹೋದರರು, ದಿ| ಕೊಂಚಾಡಿ ಗಣಪತಿ ಶೆಣೈ ಟ್ರಸ್ಟ್‌ ನಿಂದ ಶಾಲೆಯ ಕಟ್ಟಡ ನವೀಕರಣ, ಶತಮಾನೋತ್ಸವ ಸಮಿತಿ, ಎಸ್‌ಡಿಎಂಸಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘವು ಕಟ್ಟಡ, ಶಾಲಾ ವಾಹನ ಸೇರಿದಂತೆ ಅನೇಕ ರೀತಿಯಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದಲ್ಲದೆ ಇನ್ನು ಅನೇಕ ಮಂದಿ  ದಾನಿಗಳು ನೆರವಾಗಿದ್ದಾರೆ.

ಹೆಚ್ಚುವರಿ ಕಟ್ಟಡ ಬೇಡಿಕೆ:

ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಜಾಸ್ತಿಯಾಗಿದ್ದು, ಈ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮವು ಆರಂಭಗೊಂಡಿರುವುದರಿಂದ ಈಗ 16 ತರಗತಿಗಳಿವೆ. ಶತಮಾನೋತ್ಸವ ಸಮಿತಿ ನೇತೃತ್ವದಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡವು ಸೇರಿದಂತೆ ಒಟ್ಟು 13 ಕೋಣೆಗಳಿವೆ. ಇನ್ನು ಹೆಚ್ಚುವರಿಯಾಗಿ 3 ತರಗತಿ ಕೋಣೆಗಳ ಅಗತ್ಯವಿದೆ. ಪ್ರಸ್ತುತ 9 ಮಂದಿ ಖಾಯಂ, ಮೂವರು ಗೌರವ ಶಿಕ್ಷಕಿಯರಿದ್ದಾರೆ. ತರಗತಿವಾರು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೋಡಿದರೆ ಇನ್ನು 2-3 ಮಂದಿ ಶಿಕ್ಷಕರ ಅಗತ್ಯವಿದೆ. ಲ್ಯಾಬೋರೇಟರಿ ಬೇಕಾಗಿದೆ.

ಮೈದಾನ ವಿಸ್ತರಣೆ:

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗು ತ್ತಿರುವುದರಿಂದ  ಈಗಿರುವ ಆಟದ ಮೈದಾನದ ವಿಸ್ತರಣೆ ಯಾಗಬೇಕಿದೆ. ಆವರಣ ಗೋಡೆಯೂ ಪೂರ್ಣ ಪ್ರಮಾಣ ದಲ್ಲಿ ಆಗಬೇಕಿದೆ. ಇನ್ನು ಈಗಿರುವ ಬಾಲಕ- ಬಾಲಕಿಯರ ಶೌಚಾಲಯ ಮಕ್ಕಳ ಸಂಖ್ಯೆಗೆ ಅನು ಗುಣ ವಾಗಿ ಸಾಲದೇ ಇರುವುದರಿಂದ ಒಂದೆರಡು ಹೆಚ್ಚಿಸಬೇಕಿದೆ.

ಪ್ರಸ್ತಾವನೆ ಸಲ್ಲಿಕೆ:

ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಉತ್ತಮ ದಾಖಲಾತಿಯಾಗುತ್ತಿದೆ. ಗಂಗೊಳ್ಳಿಯಿಂದಲೂ ಇಲ್ಲಿಗೆ ಮಕ್ಕಳು ಬರುತ್ತಿದ್ದಾರೆ. ಶಿಕ್ಷಕರ ನೇಮಕ, ಕೊಠಡಿ, ಆವರಣ ಗೋಡೆ, ಶೌಚಾಲಯ, ಲ್ಯಾಬ್‌ನಂತಹ ಕೆಲವೊಂದು ಅಗತ್ಯ ಸೌಲಭ್ಯಗಳು ಬೇಕಾಗಿವೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶಾಸಕರಿಗೂ ಮನವಿ:

ಗುಜ್ಜಾಡಿ ಶಾಲೆಯು ಈಗ ಈ ಭಾಗದ ಉತ್ತಮ ಶಾಲೆಗಳಲ್ಲಿ ಒಂದಾಗಿದ್ದು, ಈಗಿರುವ ಸೌಲಭ್ಯಗಳೊಂದಿಗೆ ಇನ್ನೊಂದಷ್ಟು ಅಗತ್ಯ ಸೌಕರ್ಯಗಳು ಬೇಕಾಗಿವೆ. ಈ ಬಗ್ಗೆ ಇಲ್ಲಿಗೆ ಭೇಟಿ ನೀಡಿದ್ದ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರಿಗೂ ಮನವಿ ಮಾಡಿದ್ದೇವೆ. ಮಾಡಿಕೊಡುವ ಭರವಸೆ ನೀಡಿದ್ದಾರೆ.- ಇಂದಿರಾ, ಎಸ್‌ಡಿಎಂಸಿ ಅಧ್ಯಕ್ಷರು

 

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next