ಅಹಮದಾಬಾದ್: ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಾಗಿದ್ದ’ ಧೋರ್ಡೊ ಪ್ರವಾಸೋದ್ಯಮ ಗ್ರಾಮ’ದ ಟ್ಯಾಬ್ಲೋ ಜನರ ಆಯ್ಕೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಂಗಳವಾರ ಘೋಷಿಸಿದ್ದಾರೆ.
75ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶದ ವಿವಿಧ ಸಚಿವಾಲಯಗಳು ಒಟ್ಟು 25 ಟ್ಯಾಬ್ಲೋಗಳನ್ನು ಪ್ರಸ್ತುತಪಡಿಸಿದ್ದವು.
ರಾಜ್ಯ ಸರಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, MyGov ವೇದಿಕೆಯ ಮೂಲಕ ನಡೆಸಿದ ಸಾರ್ವಜನಿಕ ಮತದಾನದಲ್ಲಿ ಗುಜರಾತ್‌ನ ಟ್ಯಾಬ್ಲೋ ಸತತ ಎರಡನೇ ವರ್ಷವೂ 32 ಪ್ರತಿಶತ ಮತಗಳನ್ನು ಗಳಿಸುವ ಮೂಲಕ ಜನರ ಆಯ್ಕೆಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಎಕ್ಸ್ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ “ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ಕರ್ತವ್ಯಪಥ್‌ನಲ್ಲಿ ಆಯೋಜಿಸಲಾದ ಪರೇಡ್‌ನಲ್ಲಿ ಪ್ರದರ್ಶಿಸಲಾದ ಗುಜರಾತ್ ಟ್ಯಾಬ್ಲೋವು ಜನರ ಆಯ್ಕೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿಸಲು ನನಗೆ ಅತ್ಯಂತ ಸಂತೋಷವಾಗಿದೆ. ತೀರ್ಪುಗಾರರ ಆಯ್ಕೆ ವಿಭಾಗದಲ್ಲಿ ಗುಜರಾತ್ ಟ್ಯಾಬ್ಲೋ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
‘ಧೋರ್ಡೊ: ಗ್ಲೋಬಲ್ ಐಡೆಂಟಿಟಿ ಆಫ್ ಗುಜರಾತ್‌ನ ಬಾರ್ಡರ್ ಟೂರಿಸಂ’ ಎಂಬ ವಿಷಯವನ್ನು ಆಧರಿಸಿದ ಟ್ಯಾಬ್ಲೋ ಕಚ್‌ನ ಕಲೆ ಮತ್ತು ಸಂಸ್ಕೃತಿಯ ಆಸಕ್ತಿದಾಯಕ ಅಂಶಗಳನ್ನು ಒಳಗೊಂಡಿದೆ.