Advertisement

ತುರುಸು ಸೃಷ್ಟಿಸಿದೆ ಗುಜರಾತ್‌ ಚುನಾವಣೆ

11:31 AM Nov 20, 2017 | Team Udayavani |

ಬಿಜೆಪಿಗೆ ಹಾಲಿ ಸಾಲಿನ ಚುನಾವಣೆ ಸವಾಲೇ ಆಗಿದೆ ಎನ್ನುವುದು ಸುಳ್ಳಲ್ಲ. ಜಿಗ್ನೇಶ್‌ ಮೇವಾನಿ, ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌ ಜೊತೆ ಕೈ ಜೋಡಿಸಿದೆ ಕಾಂಗ್ರೆಸ್‌. ಈ ಮೂವರ ಪ್ರಭಾವದಿಂದ ಬಿಜೆಪಿ ವಿರುದ್ಧದ ಮತಗಳ‌ು ಕಾಂಗ್ರೆಸ್‌ನತ್ತ ಹರಿದುಬರುವುದೇ? ಎನ್ನುವುದು ಈಗ ಚರ್ಚೆಯ ವಿಚಾರವಾದರೂ, ಬಿಜೆಪಿ ತಾನು ಹೊಂದಿರುವ ಚುನಾವಣಾ ರಣತಂತ್ರವನ್ನು ಮರು ಪರಿಶೀಲಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ.

Advertisement

ಗುಜರಾತ್‌ ವಿಧಾನಸಭೆಗೆ ಹಾಲಿ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಯಾರು ಸೋಲುತ್ತಾರೋ, ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಈ ಹಿಂದಿನ ವರ್ಷಗಳಲ್ಲಿ ಇಲ್ಲದ ತುರುಸನ್ನು ಸೃಷ್ಟಿ ಮಾಡಿದ್ದಂತೂ ನಿಜವೇ. ಅದಕ್ಕೆ ಪೂರಕವಾಗಿರುವಂಥ ಬೆಳವಣಿಗೆ ಎಂದರೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವನ್ನು ಎರಡು ಬಾರಿ ಪ್ರವಾಸ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹದಿನೈದು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿ ದ್ದಾರೆ. ಪ್ರಧಾನಿಯವರಂತೂ ಎರಡು ಬಾರಿ ಭೇಟಿ ನೀಡಿ  ಪ್ರಚಾರ ಭಾಷಣ ಮಾಡಿದ್ದಾರೆ. ಜತೆಗೆ ಅನುದಿನದ ಬೆಳವಣಿಗೆಯ ಬಗ್ಗೆ ಯಥಾಸ್ಥಿತಿ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. 

ಇದರ ಜತೆಗೆ ಪಟೇಲರಿಗೆ ಮೀಸಲು ನೀಡುವ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್‌ ಪಟೇಲ್‌ ವಿರುದ್ಧ ಕೆಲವು ಸೀಡಿಗಳು ಬಿಡುಗಡೆಯಾಗಿವೆ. ಅದರಲ್ಲಿ ಅವರು ಆಕ್ಷೇಪಾರ್ಹ ಭಂಗಿಗಳಲ್ಲಿ ಇದ್ದಾರೆ ಎನ್ನುವುದು ಆರೋಪ. ಅದಕ್ಕೆ ಬಿಜೆಪಿಯವರೇ ಕಾರಣ ಎಂದು ಹಾರ್ದಿಕ್‌ ಪ್ರತ್ಯಾರೋಪವನ್ನೂ ಮಾಡಿದ್ದಾರೆ. ಕೆಲದಿನಗಳ ಹಿಂದೆ ಮೊದಲ ಸೀಡಿ ಬಿಡುಗಡೆಯಾದ ಸಂದರ್ಭದಲ್ಲಿ ಬಿಜೆಪಿಯವರು ತಮ್ಮ ವಿರುದ್ಧ ಇಂಥ ರಾಜಕೀಯ ಮಾಡುವ ಸಾಧ್ಯತೆ ಇದೆಯೆಂಬ ಮುನ್ಸೂಚನೆಯನ್ನೂ ಅವರು ಕೊಟ್ಟಿದ್ದರು. ಇದರಿಂದ ಕ್ರುದ್ಧರಾಗಿರುವ ಯುವ ಹೋರಾಟಗಾರ “ಹೆಂಡತಿಯನ್ನು ನೋಡಿಕೊಳ್ಳಲಾಗದವರು ಮತ್ತೂಬ್ಬರ ವಿರುದ್ಧ ಸೀಡಿ ಮಾಡಲು ಹೊರಟಿದ್ದಾರೆ’ ಎಂದು ಕಿಡಿ ಕಾರಿದ್ದಾರೆ. ರಾಜಕೀಯ ವಲಯದಲ್ಲಿ ಅಧಿಕಾರವೇ ಮುಖ್ಯವೇ ಎಂಬ ತತ್ವ ಮುಖ್ಯವಾದಾಗ ಏನೆಲ್ಲ ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳಲಾಗಿತ್ತೋ ಅದನ್ನೇ ಆದ್ಯತೆಯಲ್ಲಿ ಮಾಡಲಾಗುತ್ತದೆ. 

ಹಲವು ಸುದ್ದಿ ವಾಹಿನಿಗಳು ನಡೆಸಿದ ಸಮೀಕ್ಷೆ ಪ್ರಕಾರ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿಯೂ ಅಧಿಕಾರವನ್ನು ಉಳಿಸಿಕೊಳ್ಳಲಿದೆಯಂತೆ. ಅದೇ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಳೆದ ವಾರ ಮೊದಲ ಹಂತದಲ್ಲಿ 70 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿದೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಪ್ರಚಾರ ನಡೆಸಿದ್ದರೇ ಹೊರತು, ಇದುವರೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಏಕೆಂದರೆ, ಆ ಪಕ್ಷಕ್ಕೆ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಪ್ರಶ್ನೆ ಬಹುವಾಗಿ ಕಾಡುತ್ತಿದೆ. 

ಬಿಜೆಪಿಗೆ ಹಾಲಿ ಸಾಲಿನ ಚುನಾವಣೆ ಸವಾಲೇ ಆಗಿದೆ ಎನ್ನುವುದು ಸುಳ್ಳಲ್ಲ. ಜಿಗ್ನೇಶ್‌ ಮೇವಾನಿ, ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌ ಜೊತೆ ಕೈ ಜೋಡಿಸಿದೆ ಕಾಂಗ್ರೆಸ್‌. ಈ ಮೂವರ ಪ್ರಭಾವದಿಂದ ಬಿಜೆಪಿ ವಿರುದ್ಧದ ಮತಗಳ‌ು ಕಾಂಗ್ರೆಸ್‌ನತ್ತ ಹರಿದುಬರುವುದೇ? ಎನ್ನುವುದು ಈಗ ಚರ್ಚೆಯ ವಿಚಾರವಾದರೂ, ಬಿಜೆಪಿ ತಾನು ಹೊಂದಿರುವ ಚುನಾವಣಾ ರಣತಂತ್ರವನ್ನು ಮರು ಪರಿಶೀಲಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ. ಬಿಜೆಪಿ ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ (ಕೆಎಚ್‌ಎಎಂ) ಸಮುದಾಯಗಳ ಮೇಲೆ ಕೇಂದ್ರೀಕರಿಸಿ ಮತ ಪ್ರಚಾರ ನಡೆಸಲಾರಂಭಿಸಿದೆ. ಏಕೆಂದರೆ ಕ್ಷತ್ರಿಯ ಸಮುದಾ ಯದವರು ಪಟೇಲ್‌ ಮತ್ತು ಕಾಂಗ್ರೆಸ್‌ಗೆ ವಿರೋಧಿಯೇ ಆಗಿ ದ್ದಾರೆ. ಇದನ್ನೇ ಬಿಜೆಪಿ ದಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ ಎನ್ನುವುದು ಸುಳ್ಳಲ್ಲ. 

Advertisement

ಗುಜರಾತ್‌ನಲ್ಲಿ ಕ್ಷತ್ರಿಯ ಸಮುದಾಯದವರು ಒಬಿಸಿ ವರ್ಗಕ್ಕೆ ಸೇರುತ್ತಾರೆ. ಪಟೇಲ್‌ ಸಮುದಾಯದವರೂ ಮೀಸಲು ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಹಾರ್ದಿಕ್‌ ಪಟೇಲ್‌ ನಾಯಕತ್ವವನ್ನೂ ವಹಿಸಿದ್ದಾರೆ. ಇನ್ನು ಒಬಿಸಿ ವರ್ಗದ ಪ್ರಮುಖ ಯುವ ನೇತಾರ ಅಲ್ಪೇಶ್‌ ಠಾಕೂರ್‌ ಮತ್ತು ಹಾರ್ದಿಕ್‌ ಪಟೇಲ್‌ ಕೂಡ ಇದೇ ಹಿತಾಸಕ್ತಿ ಹೊಂದಿದ್ದಾರೆ. ಹೀಗಾಗಿ ಇದನ್ನೇ ದಾಳವನ್ನಾಗಿಸಲು ಪಕ್ಷ ಮುಂದಾಗಿದೆ. ಗುಜರಾತ್‌ ಕಾಂಗ್ರೆಸ್‌ನ ಪ್ರಮುಖ ಹುರಿಯಾಳುಗಳಾಗಿರುವ ಶಕ್ತಿ ಸಿನ್ಹ ಗೋಹಿಲ್‌ ಮತ್ತು ಭರತ್‌ ಸಿನ್ಹ ಸೋಲಂಕಿ ಕ್ಷತ್ರಿಯ ಸಮುದಾಯದ ನಾಯಕರು. ಇನ್ನು ಕೇಂದ್ರದ ಮಾಜಿ ಸಚಿವ ಶಂಕರ ಸಿನ್ಹ ವಘೇಲ ತೀರಾ ಇತ್ತೀಚಿನ ವರೆಗೆ ಕಾಂಗ್ರೆಸ್‌ನಲ್ಲಿಯೇ ಇದ್ದವರು. ಇನ್ನು ಬಿಜೆಪಿಗೆ ಸವಾಲಾಗಿರುವ ವಿಚಾರವೆಂದರೆ ಪಟೇಲರು. 2012ರ ಚುನಾವಣೆವರೆಗೆ ಸಮುದಾಯ ಬಿಜೆಪಿ ಪರವಾಗಿಯೇ ಇತ್ತು. ಮೀಸಲು ವಿಚಾರದ ಹೋರಾಟ ತೀವ್ರವಾಗುತ್ತಿದ್ದಂತೆಯೇ ಹಾರ್ದಿಕ್‌ ಪಟೇಲ್‌ ಮುಂಚೂಣಿಗೆ ಬಂದರು. ಅದಕ್ಕೆ ಪೂರಕ ವಾಗಿಯೇ ಇತ್ತೀಚಿನ ಬೆಳವಣಿಗೆಗಳು ನಡೆದಿವೆ. 

ಇನ್ನು ಕೆಎಚ್‌ಎಎಂ ಸೂತ್ರವನ್ನು ಕಾಂಗ್ರೆಸ್‌ ಬಿಜೆಪಿ ವಿರುದ್ಧ ಹಿಂದಿನಿಂದಲೂ ಪ್ರಯೋಗಿಸುತ್ತಾ ಬಂದಿದ್ದರೂ, ಬಿಜೆಪಿ ರಾಜ ಕೀಯ ಧ್ರುವೀಕರಣದ ಮೂಲಕ ಅದಕ್ಕೆ ಪ್ರತ್ಯುತ್ತರ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ನೋಟುಗಳ ಅಮಾನ್ಯ, ಜಿಎಸ್‌ಟಿ ಜಾರಿ, ಅಮಿತ್‌ ಷಾ ಪುತ್ರನ ಮೇಲೆ ಕೇಳಿ ಬಂದಿರುವ ಆರೋಪಗಳು ನೇರವಾಗಿ ಅಲ್ಲದಿದ್ದರೂ, ಒಂದು ಹಂತದಲ್ಲಿ ಪೆಟ್ಟು ನೀಡುವುದು ಖಚಿತವೇ ಎಂದು ಹೇಳಲಾಗುತ್ತಿದೆ. ಏಕೆಂದರೆ ಯಾರು ಯಾವ ಪಕ್ಷದಲ್ಲಿ ದ್ದರೂ, ಅಂತಿಮವಾಗಿ ಬರುವುದು ಅವರವರ ಆದಾಯದ ಮೂಲ ಮತ್ತು ಜೀವನ.

 ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಪಟೇಲರು ಶೇ.15ರಷ್ಟು, ಬ್ರಾಹ್ಮಣರು ಮತ್ತು ಬನಿಯಾ ಸಮುದಾಯ
ದವರು ಶೇ.10 ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಒಬಿಸಿ ವ್ಯಾಪ್ತಿಯಲ್ಲಿ ಕೋಲಿ ಸಮುದಾಯ ಒಟ್ಟು ಮತದಾರರ ಶೇ.20ರಷ್ಟನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಹಾಲಿ ರಾಷ್ಟ್ರಪತಿ ಅದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ನೇರವಾಗಿ ಅದನ್ನು ಪಕ್ಷ ಹೇಳಿಕೊಳ್ಳದೇ ಇದ್ದರೂ, ಮೌಖೀಕವಾಗಿ ಅಂಥ ವಿಚಾರ ಸಮರ್ಥ ವಾಗಿ ಪ್ರಚಾರ ವಾಗಿ ಹೋಗುತ್ತದೆ. ಅದೂ ಆಡಳಿತಾರೂಢ ಪಕ್ಷಕ್ಕೆ ಧನಾತ್ಮಕ ವಾಗಿಯೇ ತಿರುಗಿಕೊಳ್ಳುತ್ತದೆ. 

ಕಳೆದ ವಾರ ಮುಕ್ತಾಯವಾದ ಕಾಂಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರ ಉತ್ತರ ಗುಜರಾತ್‌ನ ಮೂರು ದಿನ  ಗಳ ಯಾತ್ರೆಯಲ್ಲಿ ಚುನಾವಣಾ ಪ್ರಚಾರ, ವಾಗ್ಧಾಳಿಯ ಜತೆಗೆ ದೇಗುಲಗಳಿಗೆ ಭೇಟಿ ನೀಡಿದ್ದು ಪ್ರಮುಖವಾಗಿಯೇ ಇತ್ತು. ಅಕ್ಷರಧಾಮ ದೇಗುಲ, ಬನಾಸ್ಕಾಂತಾದಲ್ಲಿರುವ ಅಂಬಾಜಿ ದೇಗುಲಕ್ಕೆ ಭೇಟಿ ನೀಡಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ವಿವಿಧ ಊರುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದವರ ಜತೆಗೆ ಹೆಚ್ಚಿನ ಹೊತ್ತು ಬೆರೆತದ್ದು ಈ ಬಾರಿಯ ಪ್ರವಾಸದಲ್ಲಿ ಪ್ರಮುಖವಾಗಿತ್ತು. ಶೀಘ್ರದಲ್ಲಿಯೇ ಅಧ್ಯಕ್ಷ ಹುದ್ದೆಗೆ ಏರಲಿರುವ ಅವರು ಕೊಂಚ ತಮ್ಮ ರೀತಿನೀತಿಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವುದಂತೂ ಸತ್ಯ.

ಇನ್ನು ಸದ್ಯ ಸುದ್ದಿಯಲ್ಲಿರುವ ಮೂವರು ಯುವ ನೇತರರಾಗಿ ರುವ ಜಿಗ್ನೇಶ್‌ ಮೇವಾನಿ, ಹಾರ್ದಿಕ್‌ ಪಟೇಲ್‌ ಮತ್ತು ಅಲ್ಪೇಶ್‌ ಠಾಕೂರ್‌ ಅವರ ಪೈಕಿ ಹೆಚ್ಚು ಸುದ್ದಿಯಲ್ಲಿರುವುದು ಪಟೇಲರಿಗೆ ಮೀಸಲು ನೀಡುವ  ನಿಟ್ಟಿನಲ್ಲಿ ಹೋರಾಟ ನಡೆಸಿದ ಹಾರ್ದಿಕ್‌ ಪಟೇಲ್‌. ಅವರ ವಿರುದ್ಧದ ಸೀಡಿಗಳಲ್ಲಿ ಇರುವ ಅಂಶ ಸತ್ಯವೋ ಸುಳ್ಳೋ ಎನ್ನುವುದು ಯಾರಿಗೂ ಬೇಕಾಗಿಲ್ಲ. ಸದ್ಯ ಅವರು ಹೊಂದಿರುವ ಜನಪ್ರಿಯತೆಯನ್ನು ತಗ್ಗಿಸುವುದಷ್ಟೇ ಅದರ ಉದ್ದೇಶ. ಎಂದಿನಂತೆ ಚುನಾವಣೆ ಸಂದರ್ಭಗಳಲ್ಲಿ ಬರುವಂಥ ಸೀಡಿಗಳ ರೀತಿಯಲ್ಲಿಯೇ ಇದೂ ಇದೆ. ಫ‌ಲಿತಾಂಶ ಬರುತ್ತಲೂ ಹಾರ್ದಿಕ್‌ ವಿರುದ್ಧ ಇದ್ದ ಆರೋಪಗಳ ಬಗ್ಗೆ ಎಲ್ಲರೂ ಮರೆಯುತ್ತಾರೆ.

ಆದರೆ ಸದ್ಯದ ವಿಶ್ಲೇಷಣೆ ಪ್ರಕಾರ ಕಾಂಗ್ರೆಸ್‌ ಮತ್ತು ಹಾರ್ದಿಕ್‌ ಪಟೇಲ್‌ಗೆ ತೀರಾ ಚಿಂತೆ ತರುವಂಥ ವಿಚಾರ ಇದು. ಪಟೇಲರಿಗೆ ಮೀಸಲು ತರುವ ಮತ್ತು ಸಮುದಾಯದ ಬೆಂಬಲ ಹಳೆಯ ಪಕ್ಷಕ್ಕೆ ಒದಗಿಸಿಕೊಡುವ ನಿಟ್ಟಿನಲ್ಲಿರುವಾಗಲೇ ಅಂಥ ಬೆಳವಣಿ ಗೆಗಳು ನಡೆದಿರುವುದು ಯುವ ನಾಯಕನ ಮೇಲೆ ವ್ಯತಿರಿಕ್ತ ಭಾವನೆ ತರುವುದು ಖಚಿತವಾಗಿದೆ. ಸೀಡಿಗಳು ಬಹಿರಂಗವಾಗು ವುದಕ್ಕಿಂತ ಮೊದಲು ಹುರುಪಿನಿಂದ ಮಾತುಕತೆ ಸಾಗುತ್ತಿತ್ತು. ಆದರೆ ಹಲವು ಮಾಧ್ಯಮ ವರದಿಗಳ ಪ್ರಕಾರ ಆತಂರಿಕವಾಗಿ ಯುವ ನಾಯಕನ ಇಮೇಜ್‌ಗೆ ಧಕ್ಕೆ ತಂದಿದೆ ಎಂಬ ವಿಚಾರ ಸತ್ಯ. ಹೀಗಾಯಿತು ಸ್ವಾಮಿ ಎಂದು ಹೇಳಲಿಕ್ಕಾಗುವುದಿಲ್ಲವಲ್ಲ!

ಇನ್ನು ಮೊದಲ ಹಂತದ ಚುನಾವಣೆಗಾಗಿ 70 ಮಂದಿಯ ಪಟ್ಟಿಯನ್ನು ಗಮನಿಸಿದಾಗ 16 ಮಂದಿ ಒಬಿಸಿ, 11 ಎಸ್‌ಟಿ ಮತ್ತು 3 ಎಸ್‌ಸಿ ಸಮುದಾಯಕ್ಕೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ಪಾಳಯಕ್ಕೆ ಸರಿಯಾಗಿಯೇ ಏಟು ನೀಡಿದೆ. ಪಟೇಲ್‌ ಸಮುದಾಯಕ್ಕೆ 18 ಸ್ಥಾನಗಳನ್ನು ನೀಡಲಾಗಿದೆ. ಇತ್ತೀಚೆಗೆ ಮುಗಿದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಹ್ಮದ್‌ ಪಟೇಲ್‌ ವಿರುದ್ಧ ಮತ ಹಾಕಿದ ಐವರು ಶಾಸಕರಿಗೆ ಮನ್ನಣೆ ನೀಡಿದೆ. ಹಾಲಿ ಶಾಸಕರಾಗಿರುವ ಮೂವರಿಗೆ ಸ್ಪರ್ಧೆಗೆ ಅನುಮತಿ ನೀಡಲಾಗಿಲ್ಲ. ಹೀಗಾಗಿ, ಕಾಂಗ್ರೆಸ್‌ ಯಾವ ರೀತಿಯ ಅಭ್ಯರ್ಥಿಗಳ ಆಯ್ಕೆಯ ಮೂಲಕ ದಾಳ ಉರುಳಿಸುತ್ತದೆಯೋ ನೋಡಬೇಕಾಗಿದೆ. 

ಒಂದಂತೂ ಸತ್ಯ ಇಪ್ಪತ್ತೆರಡು ವರ್ಷಗಳ ಹಿಂದೆ ಇದ್ದ ಚುನಾವಣಾ ರಾಜಕೀಯ ಈಗ ಗುಜರಾತ್‌ನಲ್ಲಿಯೂ ಇಲ್ಲ. ದೇಶದ ಇತರ ಭಾಗದಲ್ಲಿಯೂ ಇಲ್ಲ. ಕೇವಲ ಅಭಿವೃದ್ಧಿ ಎಂದರೆ ಏನಾಗಿದೆ ಎಷ್ಟಾಗಿದೆ ಎಂದು ಕೇಳುವ ಧೈರ್ಯವನ್ನು ಮತದಾರರು ಮಾಡಿದ್ದಾರೆನ್ನುವುದು ಸತ್ಯ. ಒಂದು ಹವಾ ಸೃಷ್ಟಿ ಮಾಡಿದ್ದರೂ, ಅದರ ಪ್ರಭಾವಳಿ ಒಂದು ಹಂತದ ವರೆಗೆ ಎನ್ನು ವುದು ದೇಶದ ಹಿಂದಿನ ಇತಿಹಾಸದಿಂದ ಗೊತ್ತಾಗುತ್ತದೆ. ಗುಜ ರಾತ್‌ ಚುನಾ ವಣೆಯ ಜಯದ ರಿಂಗಣ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಅದು 2019ರ ಫೈನಲ್‌ ಮ್ಯಾಚ್‌ಗೆ ತೇರ್ಗಡೆಯಾಗುವ ಹಂತಗಳನ್ನು ನಿರ್ಧರಿ ಸುತ್ತದೆ ಎನ್ನುವುದು ಸ್ಪಷ್ಟ. ಅದನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್‌ ಉಪಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯನ್ನು ನೀಡುವ ದಿನಾಂಕ ಪದೇ ಪದೆ ಮುಂದೂಡಲಾಗುತ್ತಿರುವುದು.

ಸದಾಶಿವ ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next