ಅಹಮ್ಮದಾಬಾದ್: ನೋಟು ಅಮಾನ್ಯೀಕರಣಕ್ಕೆ ಮುನ್ನ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದಿದ್ದ ಆದಾಯ ಘೋಷಣೆ ಯೋಜನೆ(ಐಡಿಎಸ್) ಗುಜರಾತಿಗಳು ಸುಮಾರು 18 ಸಾವಿರ ಕೋಟಿ ರೂಪಾಯಿಯಷ್ಟು ಕಪ್ಪುಹಣ ಘೋಷಿಸಿದ್ದರು. ಅಂದರೆ ಒಟ್ಟು 62,500 ಸಾವಿರ ಕೋಟಿ ರೂಪಾಯಿಗಳ ಕಪ್ಪು ಹಣದಲ್ಲಿ ಗುಜರಾತ್ ರಾಜ್ಯವೊಂದರಲ್ಲೇ ಶೇ.29ರಷ್ಟು ಕಪ್ಪುಹಣ ಇದ್ದಿರುವುದು ಇದೀಗ ಆರ್ ಟಿಐ ಮೂಲಕ ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 500 ರೂ. ಹಾಗೂ 1000 ರೂ. ನೋಟು ನಿಷೇಧಿಸುವ ಮುನ್ನ 2016ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಈ ಬೃಹತ್ ಮೊತ್ತದ ಕಪ್ಪು ಹಣವನ್ನು ಘೋಷಿಸಿಕೊಂಡಿದ್ದರು ಎಂಬ ಅಂಶ ಆರ್ ಟಿ ಐಯಲ್ಲಿ ನೀಡಿರುವ ವಿವರದಲ್ಲಿ ಬಹಿರಂಗವಾಗಿರುವುದಾಗಿ ವರದಿ ತಿಳಿಸಿದೆ.
ಇದರಲ್ಲಿ ಗುಜರಾತಿನ ಪ್ರಮುಖ ನಿವೇಶನ ಡೀಲರ್ ಮಹೇಶ್ ಶಾ ಬರೋಬ್ಬರಿ 13, 860 ಕೋಟಿ ರೂಪಾಯಿಯಷ್ಟು ಕಪ್ಪುಹಣ ಘೋಷಿಸಿಕೊಂಡಿರುವುದಾಗಿ ವರದಿ ಹೇಳಿದೆ. ಕಪ್ಪು ಹಣ ಮಟ್ಟಹಾಕಲು ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತರುವ ಮೊದಲು 2016ರ ಜೂನ್ ತಿಂಗಳಿನಲ್ಲಿ ಆದಾಯ ಘೋಷಣೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.
ಆದಾಯ ಘೋಷಣೆ ಯೋಜನೆಯಲ್ಲಿ ದೇಶದೆಲ್ಲೆಡೆ ಘೋಷಿಸಲಾದ ಒಟ್ಟು 65, 250 ಕೋಟಿ ರೂಪಾಯಿಗಳ ಪೈಕಿ ಶೇ.29ರಷ್ಟು ಗುಜರಾತ್ ನಲ್ಲಿ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
2016ರ ಡಿಸೆಂಬರ್ 21ರಂದು ಭರತ್ ಸಿನ್ನಾ ಅವರು ಆರ್ ಟಿಐಗೆ ಅರ್ಜಿ ಸಲ್ಲಿಸಿ ಮಾಹಿತಿ ನೀಡುವಂತೆ ಕೋರಿದ್ದರು. ಆದರೆ ಎರಡು ವರ್ಷಗಳ ನಂತರ ಮಾಹಿತಿ ನೀಡಿದೆ. ಆದರೆ ಆದಾಯ ತೆರಿಗೆ ಇಲಾಖೆ ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ಹಾಗೂ ಸರ್ಕಾರಿ ಅಧಿಕಾರಿಗಳ ಆದಾಯ ಘೋಷಣೆ ಬಗ್ಗೆ ಮೌನ ತಾಳಿದೆ ಎಂದು ವರದಿ ತಿಳಿಸಿದೆ.