ಧಾರವಾಡ: ಕರ್ನಾಟಕ ರಾಜಭವನದಲ್ಲಿ ರಾಜ್ಯಪಾಲರು ಮತ್ತು ಅಲ್ಲಿಯ ಎಲ್ಲಾ ನೌಕರರೂ ಗುಜರಾತಿಗಳೇ ತುಂಬಿಕೊಂಡಿದ್ದು ಅಲ್ಲಿ ಸದ್ಯಕ್ಕೆ ಬರೀ ಗುಜರಾತಿಗಳ ದರ್ಬಾರ್ ನಡೆಯುತ್ತಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ರಾಜ್ಯಪಾಲ ಮತ್ತು ರಾಜಭವನದ ಬಗ್ಗೆ ನೇರವಾಗಿ ಆರೋಪಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಅರ್ಹರಿಗೆ ಹಾಗೂ ಪ್ರಾಮಾಣಿಕರಿಗೆ ಸಿಗುತ್ತಿಲ್ಲ. ಇದರಿಂದ ವಿವಿಯಲ್ಲಿನ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಇನ್ನು ತಜ್ಞರ ಸಮಿತಿಯ ಶಿಫಾರಸ್ಸಿಗೆ ಬೆಲೆ ನೀಡದ ರಾಜಭವನದಿಂದ ಕುಲಪತಿಗಳ ನೇಮಕ ವಿಚಾರದಲ್ಲಿ ಹಸ್ತಕ್ಷೇಪ ಆಗುತ್ತಿದೆ.
ಅದರಲ್ಲೂ ಈಗ ರಾಜಭವನ ಗುಜರಾತಿಗಳ ದರ್ಬಾರ್‌ಗೆ ವೇದಿಕೆಯಾಗಿದೆ. ರಾಜ್ಯಪಾಲರು ಸೇರಿದಂತೆ ಅಲ್ಲಿನ ಉನ್ನತ ಮಟ್ಟದ ಅಧಿಕಾರಿಗಳೆಲ್ಲರೂ ಈಗ ಗುಜರಾತ್ ಮೂಲದವರಾಗಿದ್ದು, ಅವರು ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯಗಳ ಏಳ್ಗೆಗಾಗಿ ಕುಲಪತಿಗಳನ್ನು ನೇಮಕ ಮಾಡುವ ವಿಷಯದಲ್ಲಿ ರಾಜಭವನ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ತಜ್ಞರ ಸಮಿತಿ ಮೂಲಕವೇ ಕುಲಪತಿಗಳ ನೇಮಕ ಆಗಬೇಕು. ವಿವಿಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗಮನ ಹರಿಸದೇ, ಕೇವಲ ಕಟ್ಟಡ ಕಟ್ಟೋದು ಅದರಿಂದ ಕಮೀಷನ್ ಪಡೆಯುವುದು ಹೇಗೆ ಎಂಬುದನ್ನೇ ಲೆಕ್ಕಾಚಾರ ಹಾಕುತ್ತಿವೆ.
ಇವುಗಳನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ವಿಷಯಗಳ ಕುರಿತು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಅಲ್ಲದೇ ಕುಲಪತಿ ನೇಮಕಾತಿಯಲ್ಲಿ ರಾಜಭವನ ಹಸ್ತಕ್ಷೇಪ ತಡೆಯುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದರು.