ಪುಣೆ: ಐಪಿಎಲ್ ನ ಹೊಸ ತಂಡವಾದ ಗುಜರಾತ್ ಟೈಟಾನ್ಸ್ ತಂಡ ತಾನಾಡಿದ ಎರಡನೇ ಪಂದ್ಯದಲ್ಲೂ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 14 ರನ್ ಅಂತರದ ವಿಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಶುಭ್ಮನ್ ಗಿಲ್ ಬ್ಯಾಟಿಂಗ್ ನೆರವಿನಿಂದ 171 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ಕಳೆದುಕೊಂಡು 157 ರನ್ ಗಳಷ್ಟೇ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೈಟಾನ್ಸ್ ಗೆ ಗಿಲ್ ಬಲ ತುಂಬಿದರು. 46 ಎಸೆತ ಎದುರಿಸಿದ ಗಿಲ್ 4 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 84 ರನ್ ಗಳಿಸಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 31 ರನ್, ಮಿಲ್ಲರ್ ಅಜೇಯ 20 ರನ್ ಗಳಿಸಿದರು. ಡೆಲ್ಲಿ ಪರ ಮುಸ್ತಫಿಜುರ್ ರಹಮಾನ್ ಮೂರು ವಿಕೆಟ್ ಕಿತ್ತರೆ, ಎರಡು ವಿಕೆಟ್ ಖಲೀಲ್ ಅಹಮದ್ ಪಾಲಾಯಿತು.
ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡಿತು. 34 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಉರುಳಿತ್ತು. ನಾಯಕ ಪಂತ್ 43 ರನ್, ಲಲಿತ್ ಯಾದವ್ 25 ರನ್, ಮತ್ತು ರೋಮನ್ ಪೊವೆಲ್ 20 ರನ್ ಗಳಿಸಿದರು. ಆದರೆ ಯಾವೊಬ್ಬ ಬ್ಯಾಟರ್ ಕೂಡಾ ದೊಡ್ಡ ಇನ್ನಿಂಗ್ಸ್ ಆಡದೇ ಇದ್ದಿದ್ದು ಡೆಲ್ಲಿಗೆ ಮುಳುವಾಯಿತು.
ಗುಜರಾತ್ ಪರ ಬಿಗು ದಾಳಿ ನಡೆಸಿದ ಫರ್ಗ್ಯುಸನ್ ನಾಲ್ಕು ವಿಕೆಟ್ ಕಿತ್ತರೆ, ಶಮಿ ಎರಡು ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.