Advertisement
“ಎ’ ವಿಭಾಗದ ಲೀಗ್ ಪಂದ್ಯದಲ್ಲಿ 16 ರನ್ನುಗಳ ಮಹತ್ವದ ಮುನ್ನಡೆ ಸಂಪಾದಿಸಿದ್ದ ಮುಂಬಯಿ, ದ್ವಿತೀಯ ಸರದಿಯಲ್ಲಿ ಶೋಚನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 187ಕ್ಕೆ ಕುಸಿಯಿತು. ಆದಿತ್ಯ ತಾರೆ (59), ಶಿವಂ ದುಬೆ (55) ಅವರ ಪ್ರಯತ್ನ ಇಲ್ಲದೇ ಇರುತ್ತಿದ್ದಲ್ಲಿ ಮುಂಬಯಿ ಇನ್ನೂ ಸಣ್ಣ ಮೊತ್ತಕ್ಕೆ ಉದುರುತ್ತಿತ್ತು. ಮಧ್ಯಮ ವೇಗಿಗಳಾದ ರೂಶ್ ಕಲಾರಿಯ ಮತ್ತು ಚಿಂತನ್ ಗಜ ತಲಾ 4 ವಿಕೆಟ್ ಉಡಾಯಿಸಿ ಆತಿಥೇಯರ ಹಾದಿಯನ್ನು ದುರ್ಗಮಗೊಳಿಸಿದರು. 7ಕ್ಕೆ 156 ರನ್ನಿನಿಂದ ಮುಂಬಯಿ ಅಂತಿಮ ದಿನದಾಟ ಮುಂದುವರಿಸಿತ್ತು.
204 ರನ್ ಗುರಿ ಪಡೆದ ಗುಜರಾತ್ 41.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 206 ರನ್ ಪೇರಿಸಿ ಗೆದ್ದು ಬಂದಿತು. ಆಗ ನಾಯಕ ಕಂ ಆರಂಭಕಾರ ಪ್ರಿಯಾಂಕ್ ಪಾಂಚಾಲ್ 112 ರನ್ ಬಾರಿಸಿ ಅಜೇಯರಾಗಿದ್ದರು. 109 ಎಸೆತಗಳ ಈ ಆಕ್ರಮಣಕಾರಿ ಆಟದ ವೇಳೆ 11 ಬೌಂಡರಿ, 3 ಸಿಕ್ಸರ್ ಸಿಡಿದಿತ್ತು. ಮತ್ತೂಂಬ ಆರಂಭಕಾರ ಕುಶಾಂಗ್ ಪಟೇಲ್ 55 ರನ್ ಹೊಡೆದರು. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 128 ರನ್ ಒಟ್ಟುಗೂಡಿದ್ದರಿಂದ ಗುಜರಾತ್ ಯಾವುದೇ ಆತಂಕವಿಲ್ಲದೆ ಗೆಲುವಿನತ್ತ ದಾಪುಗಾಲಿಕ್ಕಿತು. ಭಾರ್ಗವ್ ಮೆರಾಯ್ ಅಜೇಯ 34 ರನ್ ಮಾಡಿದರು.ಪಂದ್ಯಶ್ರೇಷ್ಠ ಗೌರವ ಮುಂಬಯಿಯ ಆಲ್‌ರೌಂಡರ್ ಶಿವಂ ದುಬೆ ಅವರಿಗೆ ಒಲಿಯಿತು. ಕ್ರಮವಾಗಿ 110 ಹಾಗೂ 55 ರನ್ ಮಾಡಿದ ದುಬೆ, 81 ರನ್ ವೆಚ್ಚದಲ್ಲಿ 4 ವಿಕೆಟ್ ಉರುಳಿಸಿದ್ದರು. ಸಂಕ್ಷಿಪ್ತ ಸ್ಕೋರ್: ಮುಂಬಯಿ-297 ಮತ್ತು 187 (ತಾರೆ 59, ದುಬೆ 55, ಗಜ 57ಕ್ಕೆ 4, ಕಲಾರಿಯ 59ಕ್ಕೆ 4). ಗುಜರಾತ್-281 ಮತ್ತು ಒಂದು ವಿಕೆಟಿಗೆ 206 (ಪಾಂಚಾಲ್ ಔಟಾಗದೆ 112, ಕುಶಾಂಗ್ 55).
ಪಂದ್ಯಶ್ರೇಷ್ಠ: ಶಿವಂ ದುಬೆ.