Advertisement

ಪುಣೇರಿ ವಿರುದ್ಧ  ಗುಜರಾತ್‌ ಜಯಭೇರಿ

12:32 AM Aug 23, 2017 | Harsha Rao |

ಲಕ್ನೋ: ಮಂಗಳವಾದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಗುಜರಾತ್‌ ತಂಡ ಪುಣೇರಿ ತಂಡವನ್ನು 35-21 ಅಂಕಗಳ ಅಂತರದಿಂದ ಸೋಲಿಸಿತು. ನಾಯಕ, ಸುಕೇಶ್‌ ಹೆಗ್ಡೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇನ್ನೊಂದು ರೋಚಕ ಪಂದ್ಯದಲ್ಲಿ ಬೆಂಗಾಲ್‌ 32-31 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು.

Advertisement

ಇಲ್ಲಿಯವರೆಗೆ  ಗುಜರಾತ್‌ ಮತ್ತು ಪುಣೇರಿ ತಂಡಗಳು ಒಂದರಲ್ಲಷ್ಟೇ ಸೋತಿದ್ದವು. ಎ ವಿಭಾಗದಲ್ಲಿ ಗುಜರಾತ್‌ ತಂಡ ಅಂಕ ಗಳಿಕೆ ಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪುಣೇರಿ ತಂಡ 2ನೇ ಸ್ಥಾನದಲ್ಲಿತ್ತು. ಹೀಗಾಗಿ ಇತ್ತಂಡಗಳ ನಡುವೆ ರೋಚಕ  ಹಣಾಹಣಿಯನ್ನು ಅಭಿ ಮಾನಿಗಳು ನಿರೀಕ್ಷಿಸಿದ್ದರು. ಈ ನಿರೀಕ್ಷೆ ಸುಳ್ಳಾಗಲಿಲ್ಲ. ಗುಜರಾತ್‌ ಆಟಗಾರರು ಟ್ಯಾಕಲಿಂಗ್‌ ಮೂಲಕ ದೀಪಕ್‌ ಹೂಡಾ ಅವರನ್ನು ಹಿಡಿದು ಹಾಕುವುದರ ಮೂಲಕ ಶುಭಾರಂಭ ಮಾಡಿದರು. 3-2 ಆಗಿದ್ದಾಗ ಗುಜರಾತ್‌ ನಾಯಕ ಸುಕೇಶ್‌ ಹೆಗ್ಡೆ ಯಶಸ್ವಿ ರೈಡ್‌ ಮೂಲಕ 2 ಔಟ್‌ ಮಾಡಿ ಅಂತರವನ್ನು 5ಕ್ಕೆ ಹೆಚ್ಚಿಸಿದರು. 

16ನೇ ನಿಮಿಷದಲ್ಲಿ ಸಂದೀಪ್‌ ನರ್ವಾಲ್‌ ಅವರನ್ನು ಸುಕೇಶ್‌ ಹೆಗ್ಡೆ ಬಲಿ ಪಡೆಯುವುದರ ಮೂಲಕ ಪುಣೇರಿ ತಂಡ ಆಲೌಟ್‌ ಆಯಿತು. ಅನಂತರ ಗುಜರಾತ್‌ ತಂಡ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಅಷ್ಟರಲ್ಲಿ ಮೊದಲಾರ್ಧವೂ ಮುಗಿದಿತ್ತು. ಈ ಹಂತದಲ್ಲಿ ಗುಜರಾತ್‌ 16-7 ಮುನ್ನಡೆಯಲ್ಲಿತ್ತು.

35ನೇ ನಿಮಿಷದವರೆಗೂ ಅಂತರ ಕಾಯ್ದುಕೊಂಡ ಗುಜರಾತ್‌ ತಂಡಕ್ಕೆ ಪುಣೇರಿ ಕೊನೆಯಲ್ಲಿ ಅಂತರವನ್ನು ತಗ್ಗಿಸಿಕೊಳ್ಳುವ ಮೂಲಕ ತಿರುಗಿ ಬೀಳುವ ಸೂಚನೆ ನೀಡಿತು. ಆಗ ಗುಜರಾತ್‌ 23, ಪುಣೇರಿ 16 ಅಂಕ ಗಳಿಸಿತ್ತು. 
ಅಂತಿಮ ಕ್ಷಣದ ವರೆಗೆ ಟ್ಯಾಕಲಿಂಗ್‌, ರೈಡಿಂಗ್‌ ಮೂಲಕ ಅಂಕ ಹೆಚ್ಚಿಸಿಕೊಳ್ಳುತ್ತಲೇ ಹೋದ ಗುಜರಾತ್‌ ಕಡೆಯ ನಿಮಿಷದಲ್ಲಿ ಪುಣೇರಿ ತಂಡವನ್ನು ಆಲೌಟ್‌ ಮಾಡುವ ಮೂಲಕ 35-21 ಅಂತರದ ಭಾರೀ ಅಂತರದ ಜಯ ದಾಖಲಿಸಿತು. ಸುಕೇಶ್‌ ಹೆಗ್ಡೆ ಬೆಸ್ಟ್‌ ರೈಡರ್‌ ಆಗಿ ಹೊರಹೊಮ್ಮಿದರು.

Advertisement

Udayavani is now on Telegram. Click here to join our channel and stay updated with the latest news.

Next