ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ನಿರ್ಣಾಯಕ ಕ್ವಾಲಿಫಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಮೇ 28 ರಂದು ಅಹಮದಾಬಾದ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಸೆಣಸಾಡಲಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟೈಟಾನ್ಸ್ 3 ವಿಕೆಟ್ ಗಳ ನಷ್ಟಕ್ಕೆ 233ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು.ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಅಮೋಘ ಶತಕ ಸಿಡಿಸಿದರು. ಗೆಲ್ಲಲು 234ರನ್ ಗಳ ಸವಾಲು ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಮುಂಬೈ ಹೋರಾಟ ಸಂಘಟಿಸುವಲ್ಲಿ ಯಶಸ್ವಿಯಾಗದೆ 18.2 ಓವರ್ ಗಳಲ್ಲಿ 171 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ನಾಯಕ ರೋಹಿತ್ ಶರ್ಮಾ 8 ರನ್ ಮತ್ತು ನೆಹಾಲ್ ವಧೇರಾ 4 ರನ್ ಗಳಿಗೆ ಔಟಾಗಿ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ ಗಾಯಾಳಾಗಿ ಬ್ಯಾಟಿಂಗ್ ಗೆ ಇಳಿಯಲಿಲ್ಲ. ಕ್ಯಾಮೆರಾನ್ ಗ್ರೀನ್ 30 ರನ್ ಗಳಿಸಿ ಔಟಾದರು. ಭರವಸೆ ಮೂಡಿಸಿದ ಸೂರ್ಯಕುಮಾರ್ ಯಾದವ್ 61 ರನ್ ಗಳಿಸಿದ್ದ ವೇಳೆ ಮೋಹಿತ್ ಶರ್ಮಾ ಬೌಲ್ಡ್ ಮಾಡಿದರು.
ಮುಂಬೈ ಪರ ಬಿಗು ದಾಳಿ ನಡೆಸಿದ ಮೋಹಿತ್ ಶರ್ಮಾ 2.2 ಓವರ್ ಎಸೆದು 5 ವಿಕೆಟ್ ಪಡೆದರು. ರಶೀದ್ ಖಾನ್ , ಶಮಿ ತಲಾ 2 ವಿಕೆಟ್ ಕಿತ್ತರು.
Related Articles
ಗಿಲ್ ಕಮಾಲ್
ಆರಂಭದಿಂದಲೂ ಭರ್ಜರಿ ಆಟವಾಡಿದ ಶುಭ್ ಮನ್ ಗಿಲ್ 129 ರನ್ ಗಳಿಸಿ ಔಟಾದರು. 60 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಆಕಾಶ್ ಮಧ್ವಲ್ ಎಸೆದ ಚೆಂಡನ್ನು ಟಿಮ್ ಡೇವಿಡ್ ಕೈಗಿತ್ತು ನಿರ್ಗಮಿಸಿದರು.
ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಪಟ್ಟಿಯಲ್ಲಿ ಗಿಲ್ ಸೇರಿಕೊಂಡರು. ವಿರಾಟ್ ಕೊಹ್ಲಿ (RCB) 2016 ರಲ್ಲಿ 4 ಶತಕಗಳನ್ನು ಸಿಡಿಸಿದ್ದರು. 2022 ರಲ್ಲಿ ಜೋಸ್ ಬಟ್ಲರ್ (RR) 4 ಶತಕಗಳನ್ನು ಸಿಡಿಸಿದ್ದರು. ಈ ಬಾರಿ ಶುಭಮನ್ ಗಿಲ್ 3 ನೇ ಶತಕವನ್ನು ದಾಖಲಿಸಿದರು.
ವೃದ್ಧಿಮಾನ್ ಸಹಾ 18 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ 43 ಗಳಿಸಿದ್ದ ವೇಳೆ ನೋವಿನಿಂದ ನಿವೃತ್ತಿ ಹೊಂದಿದರು. ನಾಯಕ ಹಾರ್ದಿಕ್ ಪಾಂಡ್ಯ 28ರನ್ ಮತ್ತು ರಶೀದ್ ಖಾನ್ 5 ರನ್ ಗಳಿಸಿದರು.