Advertisement

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

10:50 PM May 23, 2022 | Team Udayavani |

ಕೋಲ್ಕತಾ: ಐಪಿಎಲ್‌ ಪಂದ್ಯಾವಳಿ ಮತ್ತೊಂದು ದಿಕ್ಕಿನತ್ತ ಮುಖ ಮಾಡಿದೆ. ಮಹಾರಾಷ್ಟ್ರದ 4 ಅಂಗಳಗಳಲ್ಲಿ 70 ಲೀಗ್‌ ಪಂದ್ಯಗಳು ಯಶಸ್ವಿಯಾಗಿ ಮುಗಿದ ಬಳಿಕ ಪ್ಲೇ ಆಫ್ ಸ್ಪರ್ಧೆಗಳಿಗೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಪಂದ್ಯಾವಳಿಯೀಗ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನತ್ತ ಮುಖ ಮಾಡಿದೆ. ಮಂಗಳವಾರ ಇಲ್ಲಿ ಟೇಬಲ್‌ ಟಾಪರ್‌ ಗುಜರಾತ್‌ ಟೈಟಾನ್ಸ್‌ ಮತ್ತು ಲೀಗ್‌ ಹಂತದ ದ್ವಿತೀಯ ಸ್ಥಾನಿಯಾಗಿರುವ ರಾಜಸ್ಥಾನ್‌ ರಾಯಲ್ಸ್‌ ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಡಲಿವೆ.

ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಸೋತ ತಂಡಕ್ಕೆ ಇನ್ನೊಂದು ಅವಕಾಶವಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಇದು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಅಕಸ್ಮಾತ್‌ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೆ ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಇದು ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮುಂದಿರುವ ತಂಡಕ್ಕೆ ಲಾಭ ತರಲಿದೆ. ಕೋಲ್ಕತಾದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಪ್ಲೇ ಆಫ್ ಪಂದ್ಯಗಳಿಗೆ ಭೀತಿ ಎದುರಾಗಿದೆ.

ಟೇಬಲ್‌ ಟಾಪರ್‌
ತನ್ನ ಪದಾರ್ಪಣ ಸೀಸನ್‌ನಲ್ಲೇ ಎಲ್ಲರ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿರುವ ಗುಜರಾತ್‌ ಟೈಟಾನ್ಸ್‌ 14ರಲ್ಲಿ 10 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿರುವುದು ವಿಶೇಷ. ಇನ್ನೊಂದೆಡೆ ರಾಜಸ್ಥಾನ್‌ ರಾಯಲ್ಸ್‌ 9 ಪಂದ್ಯಗಳನ್ನು ಗೆದ್ದು ದ್ವಿತೀಯ ಸ್ಥಾನದ ಗೌರವ ಸಂಪಾದಿಸಿದೆ. ಲೀಗ್‌ ಹಂತದಲ್ಲಿ ಇತ್ತಂಡಗಳು ಒಮ್ಮೆ ಮುಖಾಮುಖಿ ಆಗಿವೆ. ಇದರಲ್ಲಿ ಗುಜರಾತ್‌ 37 ರನ್ನುಗಳ ಜಯ ಸಾಧಿಸಿದೆ. ರಾಜಸ್ಥಾನ್‌ ಇದಕ್ಕೆ ಸೇಡು ತೀರಿಸಿಕೊಂಡು ರಾಜಸ್ಥಾನ್‌ ನೇರವಾಗಿ ಫೈನಲ್‌ಗೆ ನೆಗೆದೀತೇ? ಹೀಗೊಂದು ಕುತೂಹಲ.

ಪಾಂಡ್ಯ ಯಶಸ್ವಿ ನಾಯಕತ್ವ
ಮೇಲ್ನೋಟಕ್ಕೆ ರಾಜಸ್ಥಾನ್‌ ಬಲಿಷ್ಠವಾಗಿ ಗೋಚರಿಸಿದರೂ ಟಿ20 ಸಂಪನ್ಮೂಲವನ್ನು ಸಂಪೂರ್ಣವಾಗಿ ಬಳಸಿಕೊಂಡದ್ದು ಗುಜರಾತ್‌ ಟೈಟಾನ್ಸ್‌. ಹಾರ್ದಿಕ್‌ ಪಾಂಡ್ಯ ಮೊದಲ ಸಲ ಐಪಿಎಲ್‌ ಫ್ರಾಂಚೈಸಿಯೊಂದರ ನಾಯಕನಾಗಿ ಅಚ್ಚರಿಯ ಯಶಸ್ಸು ಸಾಧಿಸಿದರು. ಫಾರ್ಮ್ ಹಾಗೂ ಫಿಟ್‌ನೆಸ್‌ಗಳೆರಡರಲ್ಲೂ ಅವರದು ಭರಪೂರ ಯಶಸ್ಸು. ಸಾಮಾನ್ಯವಾಗಿ ಕೊನೆಯಲ್ಲಿ ಬಂದು ಸಿಡಿದು ನಿಲ್ಲುತ್ತಿದ್ದ ಪಾಂಡ್ಯ, ಇಲ್ಲಿ ಅಗ್ರ ಕ್ರಮಾಂಕದಲ್ಲೇ ಕ್ರೀಸ್‌ ಇಳಿದು ಅತ್ಯಂತ ಜವಾಬ್ದಾರಿಯುತ ಪ್ರದರ್ಶನ ನೀಡತೊಡಗಿದರು. ತಂಡ ಕುಸಿದಾಗಲೆಲ್ಲ ಎತ್ತಿ ನಿಲ್ಲಿಸಿದರು. ಹೀಗಾಗಿ ಪಾಂಡ್ಯ ಮರಳಿ ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಳ್ಳುವಂತಾಯಿತು.

Advertisement

ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯ, ರಶೀದ್‌ ಖಾನ್‌, ಮ್ಯಾಥ್ಯೂ ವೇಡ್‌… ಹೀಗೆ ಬ್ಯಾಟಿಂಗ್‌ ವಿಭಾಗದಲ್ಲಿ ಒಬ್ಬರಲ್ಲ ಒಬ್ಬರು ಮಿಂಚುತ್ತಲೇ ಇರುತ್ತಾರೆ. ಶುಭಮನ್‌ ಗಿಲ್‌ ತಮ್ಮ ಆರಂಭದ ಅಬ್ಬರವನ್ನು ಮುಂದುವರಿಸುವಲ್ಲಿ ವಿಫ‌ಲರಾಗುತ್ತಿದ್ದರೂ ಸಾಹಾ ಆಗಮನದ ಬಳಿಕ ತಂಡದ ಓಪನಿಂಗ್‌ ಹೆಚ್ಚು ಬಲಿಷ್ಠಗೊಂಡಿದೆ.

ಶಮಿ, ಅಲ್ಜಾರಿ ಜೋಸೆಫ್, ಫ‌ರ್ಗ್ಯುಸನ್‌ ವೇಗದ ವಿಭಾಗದ ಪ್ರಮುಖರು. ಆರಂಭದಲ್ಲಿ ಬ್ಯಾಟಿಂಗ್‌ ಮೂಲಕ ಸುದ್ದಿಯಾದ ರಶೀದ್‌ ಖಾನ್‌ ಈಗ ವಿಕೆಟ್‌ ಬೇಟೆಯಲ್ಲೂ ತೊಡಗಿರುವುದು ಶುಭ ಸಮಾಚಾರ. ಆದರೆ ಕೊನೆಯ ಲೀಗ್‌ ಪಂದ್ಯದಲ್ಲಿ ಗುಜರಾತ್‌ ಆರ್‌ಸಿಬಿಗೆ ಶರಣಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ರಾಜಸ್ಥಾನ್‌ ಹಿಟ್ಟರ್
ರಾಜಸ್ಥಾನ್‌ ರಾಯಲ್ಸ್‌ ಪಾಳೆಯಲ್ಲಿ ಹಾರ್ಡ್‌ ಹಿಟ್ಟರ್ ಭಾರೀ ಸಂಖ್ಯೆಯಲ್ಲಿದ್ದಾರೆ. ಬಟ್ಲರ್‌, ಸ್ಯಾಮ್ಸನ್‌, ಜೈಸ್ವಾಲ್‌,

ಹೆಟ್‌ಮೈರ್‌, ಪಡಿಕ್ಕಲ್‌, ಪರಾಗ್‌… ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ 3 ಶತಕದೊಂದಿಗೆ ಅಬ್ಬರಿಸಿದ ಬಟ್ಲರ್‌ ಕಳೆದ ಕೆಲವು ಪಂದ್ಯಗಳಲ್ಲಿ ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದಾರೆ. ಹಿಂದಿನ 3 ಪಂದ್ಯಗಳಲ್ಲಿ ಡಬಲ್‌ ಫಿಗರ್‌ ತಲುಪಿಲ್ಲ (2, 2, 7). ಇಂಗ್ಲಿಷ್‌ಮ್ಯಾನ್‌ ಮತ್ತೆ ಸಿಡಿದು ನಿಂತರೆ ತಂಡಕ್ಕದು ಬಂಪರ್‌!

ಬೌಲ್ಟ್, ಚಹಲ್‌, ಅಶ್ವಿ‌ನ್‌, ಮೆಕಾಯ್‌, ಕೋಲ್ಟರ್‌ ನೈಲ್‌, ಸೈನಿ ಅವರನ್ನೊಳಗೊಂಡ ರಾಜಸ್ಥಾನ್‌ ಬೌಲಿಂಗ್‌ ವೈವಿಧ್ಯಮಯ.

ಮಳೆ ಇಲ್ಲದಿದ್ದರೆ ಇಬ್ಬನಿ!
ಕೊನೆಯಲ್ಲಿ ಉಳಿಯುವ ಪ್ರಶ್ನೆಯೆಂದರೆ “ಈಡನ್‌ ಟ್ರ್ಯಾಕ್‌’ ಹೇಗೆ ವರ್ತಿ ಸುತ್ತದೆ ಎಂಬುದು. ಇದು ಇಲ್ಲಿ ನಡೆಯುವ ಮೊದಲ ಐಪಿಎಲ್‌ ಪಂದ್ಯ. 3 ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಪಿಚ್‌ ಹಾನಿಗೊಂಡಿದೆ. ಮಳೆ ನಿಂತರೆ ಇಬ್ಬನಿಯ ಸವಾಲು ಎದುರಾಗಲಿದೆ. ಹೀಗಾಗಿ ಟಾಸ್‌ ನಿರ್ಣಾಯಕ. ಮೊದಲು ಬ್ಯಾಟಿಂಗ್‌ ನಡೆಸುವುದು ಸೇಫ್ ಎಂಬುದೊಂದು ಲೆಕ್ಕಾಚಾರ.

ಪ್ಲೇ ಆಫ್ ಮಾರ್ಗಸೂಚಿ
1. ಐಪಿಎಲ್‌ ಕ್ವಾಲಿಫೈಯರ್‌-1, ಎಲಿಮಿನೇಟರ್‌, ಕ್ವಾಲಿಫೈಯರ್‌-2 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಆದರೆ ಫೈನಲ್‌ ಪಂದ್ಯಕ್ಕೆ ಮೇ 30 ಮೀಸಲು ದಿನವಾಗಿರಲಿದೆ. ಅಂದು ಕೂಡ ಪಂದ್ಯ ರಾತ್ರಿ 8 ಗಂಟೆಗೇ ಆರಂಭವಾಗಲಿದೆ.

2. ಪ್ಲೇ ಆಫ್ ಪಂದ್ಯಗಳಿಗೆ ಮಳೆಯಿಂದ ಅಡಚಣೆಯಾದರೆ, ಪಂದ್ಯ ನಡೆಯದೇ ಹೋದರೆ ಆಗ ಸೂಪರ್‌ ಓವರ್‌ ಮೂಲಕ ವಿಜೇತ ತಂಡವನ್ನು ನಿರ್ಧರಿಸಲಾಗುವುದು. ಸೂಪರ್‌ ಓವರ್‌ ಕೂಡ ಅಸಾಧ್ಯವೆಂದಾದರೆ, ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮುಂದಿರುವ ತಂಡವನ್ನು ಜಯಶಾಲಿ ಎಂದು ತೀರ್ಮಾನಿಸಲಾಗುವುದು. ಉದಾಹರಣೆಗೆ, ಗುಜರಾತ್‌-ರಾಜಸ್ಥಾನ್‌ ಪಂದ್ಯ ರದ್ದಾದರೆ ಗುಜರಾತ್‌ ಮುನ್ನಡೆಯಲಿದೆ. ಲಕ್ನೋ-ಆರ್‌ಸಿಬಿ ನಡುವಿನ ಮುಖಾಮುಖಿ ನಡೆಯದೇ ಹೋದರೆ ಲಕ್ನೋ ಮುಂದಿನ ಹಂತ ತಲುಪಲಿದೆ.
ಫೈನಲ್‌ ಗೂ ಈ ನಿಯಮ ಅನ್ವಯಿಸಲಿದೆ.

3. ಕ್ವಾಲಿಫೈಯರ್‌ ಅಥವಾ ಎಲಿಮಿನೇಟರ್‌ ಹಂತದ ಪಂದ್ಯಗಳ ವೇಳೆ ಕೇವಲ ಒಂದು ಇನ್ನಿಂಗ್ಸ್‌ ಮಾತ್ರ ಪೂರ್ಣಗೊಂಡು ಬಳಿಕ ಮಳೆಯಿಂದ ಅಡಚಣೆಯಾದರೆ ಆಗ ಡಿಎಲ್‌ಎಸ್‌ ನಿಯಮವನ್ನು ಬಳಸಲಾಗುವುದು.

4. ಟಾಸ್‌ ಬಳಿಕವೂ ಫೈನಲ್‌ ಪಂದ್ಯ ನಿಗದಿತ ದಿನದಂದು ಒಂದೂ ಎಸೆತ ಕಾಣದೆ ರದ್ದುಗೊಂಡರೆ ಮೀಸಲು ದಿನ ಮತ್ತೆ ಟಾಸ್‌ ಹಾರಿಸಲಾಗುವುದು. ಆಗ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರಲಿದೆ.

5. ನಿಗದಿನ ದಿನದಂದು ಫೈನಲ್‌ ಪಂದ್ಯ ಅರ್ಧಕ್ಕೆ ನಿಂತಲ್ಲಿ, ಮೀಸಲು ದಿನದಂದು ಈ ಹಂತದಿಂದಲೇ ಪಂದ್ಯ ಮುಂದುವರಿಯಲಿದೆ. ಉದಾಹರಣೆಗೆ, ನಿಗದಿತ ದಿನ ಒಂದೇ ಎಸೆತಕ್ಕೆ ಪಂದ್ಯ ನಿಂತರೂ ಮೀಸಲು ದಿನದಂದು 2ನೇ ಎಸೆತದಿಂದ ಆಟವನ್ನು ಮುಂದುವರಿಸಲಾಗುವುದು.

6. ಪ್ರತಿಯೊಂದು ಪ್ಲೇ ಆಫ್ ಪಂದ್ಯಕ್ಕೆ ಹೆಚ್ಚುವರಿಯಾಗಿ 120 ನಿಮಿಷಗಳನ್ನು ನೀಡಲಾಗಿದೆ. ಮೀಸಲು ದಿನದಂದು ನಡೆಯುವ ಫೈನಲ್‌ ಪಂದ್ಯಕ್ಕೂ ಈ ನಿಯಮ ಅನ್ವಯಿಸಲಿದೆ.

7. ಪ್ಲೇ ಆಫ್ ಹಾಗೂ ಫೈನಲ್‌ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ ಕ್ರಮವಾಗಿ ರಾತ್ರಿ 9.40 ಹಾಗೂ ರಾತ್ರಿ 10.10ರ ಅವಧಿಯನ್ನು “ಕಟ್‌ ಆಫ್ ಟೈಮ್‌’ ಎಂದು ನಿಗದಿಗೊಳಿಸಲಾಗಿದೆ. ಈ ಅವಧಿಯ ಬಳಿಕವಷ್ಟೇ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು.

8. ಕನಿಷ್ಠ 5 ಓವರ್‌ಗಳ ಆಟದ ಮೂಲಕ ಪಂದ್ಯದ ಫ‌ಲಿತಾಂಶವನ್ನು ಪಡೆಯಲು ಪ್ರಯತ್ನಿಸಲಾಗುವುದು. ರಾತ್ರಿ 11.56ರ ತನಕ 5 ಓವರ್‌ಗಳ ಪಂದ್ಯವನ್ನು ಆರಂಭಿಸಲು ಅವಕಾಶವಿದೆ. 12.50 ಪಂದ್ಯದ ಮುಕ್ತಾಯದ ಅವಧಿ. ಇದು 10 ನಿಮಿಷಗಳ ವಿರಾಮ, 2 ಟೈಮ್‌ಔಟ್‌ಗಳನ್ನು ಒಳಗೊಂಡಿದೆ.

9. ಹೆಚ್ಚುವರಿ ಅವಧಿಯಲ್ಲೂ ಫೈನಲ್‌ ಪಂದ್ಯ ಮುಗಿಯದೇ ಹೋದರೆ ಸೂಪರ್‌ ಓವರ್‌ ಆರಂಭಿಸಲು ರಾತ್ರಿ 1.20ರ ತನಕ ಕಾಲಾವಕಾಶವಿದೆ.

10. ಇಲ್ಲಿ ಜಂಟಿ ಚಾಂಪಿಯನ್ಸ್‌ಗೆ ಅವಕಾಶವಿಲ್ಲ. ಎಲ್ಲ ಮಾರ್ಗ ಗಳೂ ಮುಚ್ಚಿ ಫೈನಲ್‌ ಪಂದ್ಯ ರದ್ದುಗೊಂಡರೆ ಆಗ ಲೀಗ್‌ ಹಂತದಲ್ಲಿ ಮುಂದಿರುವ ತಂಡ ಚಾಂಪಿಯನ್‌ ಎನಿಸಿಕೊಳ್ಳಲಿದೆ.

11. ಪಂದ್ಯ ಅಥವಾ ಸೂಪರ್‌ ಓವರ್‌ ಟೈ ಆದರೆ, ಸ್ಪಷ್ಟ ಫ‌ಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಎಸೆಯಲಾಗುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next