ವಡೋದರಾ: ಗುಜರಾತ್‌ನಲ್ಲಿ ಶಾಲಾ ಪಿಕ್‌ನಿಕ್‌ವೊಂದು ದುರಂತದಲ್ಲಿ ಕೊನೆಯಾಗಿದೆ. ವಡೋದರಾ ನಗರದ ಹೊರವಲಯದ ಹಾರ್ನಿ ಸರೋವರದಲ್ಲಿ ಪಿಕ್‌ನಿಕ್‌ಗೆ ತೆರಳಿದ್ದ ಶಾಲಾ ವಿದ್ಯಾರ್ಥಿಗಳಿದ್ದ ದೋಣಿಯೊಂದು ಮುಳುಗಿದ ಪರಿಣಾಮ, 14 ವಿದ್ಯಾರ್ಥಿಗಳು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ.
ಖಾಸಗಿ ಶಾಲೆಯೊಂದರ 27 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಗುರುವಾರ ಪಿಕ್‌ನಿಕ್‌ಗೆ ತೆರಳಿದ್ದರು. ದೋಣಿ ವಿಹಾರದ ವೇಳೆ ಇವರ್ಯಾರೂ ಜೀವರಕ್ಷಕ ಜಾಕೆಟ್ ಧರಿಸಿರಲಿಲ್ಲ. ಸರೋವರದಲ್ಲಿ ಸ್ವಲ್ಪ ಮುಂದಕ್ಕೆ ಸಾಗುತ್ತಿದ್ದಂತೆ ಏಕಾಏಕಿ ದೋಣಿ ಮಗುಚಿದೆ. ಪರಿಣಾಮ, 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಜಲಸಮಾಧಿಯಾಗಿದ್ದಾರೆ. 7 ಮಂದಿಯನ್ನು ರಕ್ಷಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ವಡೋದರಾದ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಪರಿಹಾರ ಘೋಷಣೆ: ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ., ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿ, ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ, ರಾಜ್ಯ ಸರಕಾರದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ., ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಬೋಟ್ ಗುತ್ತಿಗೆದಾರನ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ. ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಲಾಗಿತ್ತು. ಹೀಗಾಗಿಯೇ ಅದು ಮಗುಚಿ ಬಿದ್ದಿದೆ.
ಶೈಲೇಶ್ ಮೆಹ್ತಾ, ವಡೋದರಾ ಶಾಸಕ