ಗುಜರಾತ್: ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇಬ್ಬರು ಶಾಸಕರು ಕೈ ಕೊಟ್ಟಿದ್ದು, ಇದರಿಂದಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆ ಸೋಲಿನ ಭೀತಿ ಎದುರಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕರಾದ ರಾಘವ್ ಜೀ ಪಟೇಲ್, ಬೋಲಬ್ ಬಾಯ್ ಅವರು ಅಡ್ಡಮತದಾನ ಮಾಡಿದ್ದಾರೆನ್ನಲಾಗಿದೆ. ಮತ್ತೊಂದೆಡೆ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ತಾನು ಅಹ್ಮದ್ ಪಟೇಲ್ ಗೆ ಮತ ಹಾಕಿಲ್ಲ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಶಂಕರ್ ಸಿನ್ನಾ ವಘೇಲಾ ಮಂಗಳವಾರ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆದ್ದೇ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದರೆ, ಅಹ್ಮದ್ ಪಟೇಲ್ ಸೋಲು ಖಚಿತ ಎಂದು ಗುಜರಾತ್ ಮುಖ್ಯಮಂತ್ರಿ ರೂಪಾನಿ ಸೋಮವಾರ ಹೇಳಿಕೆ ನೀಡಿದ್ದರು. ಸೋಲು, ಗೆಲುವಿನ ಚಿತ್ರಣ ಇಂದು ಸಂಜೆ ಬಹಿರಂಗವಾಗಲಿದೆ.
ಅಹ್ಮದ್ ಪಟೇಲ್ ಗೆಲ್ಲಲಯ 45 ಶಾಸಕರ ಮತಗಳ ಅಗತ್ಯವಿದೆ. ಸದ್ಯ ರೆಸಾರ್ಟ್ ನಲ್ಲಿದ್ದ ಶಾಸಕರ ಸಂಖ್ಯೆ 44. ಈ 44 ಶಾಸಕರಲ್ಲಿಯೇ ಇಬ್ಬರು ಅಡ್ಡಮತದಾನ ಮಾಡಿದ್ದಾರೆನ್ನಲಾಗಿದೆ. ಎನ್ ಸಿಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಎನ್ ಸಿಪಿ ಶಾಸಕರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಘೇಲಾ ತಮ್ಮ ಬಣದಲ್ಲಿರುವ ಶಾಸಕರು ಪಟೇಲ್ ಗೆ ಮತ ಚಲಾಯಿಸಬಾರದೆಂದು ಕರೆ ಕೊಟ್ಟಿದ್ದರು.
ಗುಜರಾತ್ ವಿಧಾನಸಭೆಯಲ್ಲಿ 121 ಬಿಜೆಪಿ ಶಾಸಕರಿದ್ದ ಕಾರಣ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಗೆಲುವು ಖಚಿತ. ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕಾಂಗ್ರೆಸ್ಸಿಗ, ಹಾಲಿ ಬಿಜೆಪಿ ಅಭ್ಯರ್ಥಿ ಬಲವಂತ್ ಸಿಂಗ್ ರಜಪೂತ್ ಸೋಲು, ಗೆಲುವನ್ನು ಕಾದು ನೋಡಬೇಕಾಗಿದೆ.