Advertisement

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

01:48 PM Nov 18, 2024 | Team Udayavani |

ನವದೆಹಲಿ: ಗುಜರಾತ್‌ ಮೂಲದ ಪ್ರಥಮ ವರ್ಷದ ಎಂಬಿಬಿಎಸ್‌ (MBBS) ವಿದ್ಯಾರ್ಥಿಯೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ (Ragging) ಮಾಡಿದ ಪರಿಣಾಮ ಸಾವಿಗೆ ಶರಣಾದ ಘಟನೆ ಗುಜರಾತ್‌ ನಲ್ಲಿ ನಡೆದಿದೆ.

Advertisement

ಅನಿಲ್‌ ಮೆಥಾನಿಯಾ ಹಾಗೂ ಇತರ ವಿದ್ಯಾರ್ಥಿಗಳು 2024ನೇ ಸಾಲಿನಲ್ಲಿ ಗುಜರಾತ್‌ ನ ಧಾರ್ಪುರ್‌ ಪಟಾನ್‌ ನ GMERS ಮೆಡಿಕಲ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾಗಿ ದಾಖಲಾಗಿದ್ದರು.

3ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿ ಅನಿಲ್‌ ಗೆ ಪರಿಚಯ ಹೇಳಿಸುವ ನೆಪದಲ್ಲಿ ಹಾಸ್ಟೆಲ್‌ ನಲ್ಲಿ ಸುಮಾರು 3ಗಂಟೆಗಳ ಕಾಲ ನಿಲ್ಲುವ ಶಿಕ್ಷೆ ವಿಧಿಸಿರುವುದಾಗಿ ವರದಿ ವಿವರಿಸಿದೆ. ಎಂಬಿಬಿಎಸ್‌ ಸೇರಿದಂತೆ ಉನ್ನತ ಶಿಕ್ಷಣದ ಹಾಸ್ಟೆಲ್‌ ಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು Ragging ಹೆಸರಿನಲ್ಲಿ ಕಿರುಕುಳ ನೀಡುವ ಬಗ್ಗೆ ಹಲವು ದೂರುಗಳು ಆಗಾಗ ಬಹಿರಂಗವಾಗುತ್ತಿರುತ್ತದೆ.

ಹೀಗೆ ವಿದ್ಯಾರ್ಥಿ ಅನಿಲ್‌ ಮೆಥಾನಿಯಾಗೆ 3 ಗಂಟೆಗಳ ಕಾಲ ನಿಲ್ಲಿಸಿದ ಪರಿಣಾಮ ಆತ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಅನಿಲ್‌ ಕೊನೆಯುಸಿರೆಳೆದಿದ್ದ. ಅನಿಲ್‌ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಕೈಸೇರಿದ ನಂತರ ಸಾವಿನ ನಿಖರ ಕಾರಣ ತಿಳಿಯುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಅನಿಲ್‌ ಸೋದರ ಸಂಬಂಧಿ ಧರ್ಮೇಂದ್ರ ಅವರು ನೀಡಿದ ಮಾಹಿತಿ ಪ್ರಕಾರ, ಅನಿಲ್‌ ಕುಟುಂಬ ಗುಜರಾತ್‌ ನ ಮೆಡಿಕಲ್‌ ಕಾಲೇಜು ಪ್ರದೇಶವಾದ ಪಟಾನ್‌ ನಿಂದ ಸುಮಾರು 150 ಕಿಲೋ ಮೀಟರ್‌ ದೂರದಲ್ಲಿರುವ ಸುರೇಂದ್ರನಗರ್‌ ಜಿಲ್ಲೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.

ಭಾನುವಾರ (ನ.17) ನಾವು ಮೆಡಿಕಲ್‌ ಕಾಲೇಜ್‌ ನಿಂದ ಮೊಬೈಲ್‌ ಕರೆ ಬಂದಿದ್ದು, ಅನಿಲ್‌ ದಿಢೀರನೆ ಕುಸಿದು ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. ನಾವು ಕಾಲೇಜಿಗೆ ಭೇಟಿ ನೀಡಿದ ನಂತರ ಹಿರಿಯ ವಿದ್ಯಾರ್ಥಿಗಳು ಆತನಿಗೆ ಕಿರುಕುಳ ನೀಡಿದ ವಿಷಯ ತಿಳಿಯಿತು. ನಮಗೆ ನ್ಯಾಯ ಸಿಗಬೇಕು ಎಂದು ಧರ್ಮೇಂದ್ರ ತಿಳಿಸಿದ್ದಾರೆ.

ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರ ಮೇಲೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಕೆಕೆ ಪಾಂಡ್ಯ  ತಿಳಿಸಿದ್ದು, ಹಿರಿಯ ವಿದ್ಯಾರ್ಥಿಗಳ Ragging ಕುರಿತು ಮೆಡಿಕಲ್‌ ಕಾಲೇಜಿನಿಂದ ದೀರ್ಘ ವಿವರಣೆ ಕೇಳಿದ್ದೇವೆ. ಸುಮಾರು 15 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next