ಅಹಮದಾಬಾದ್: ದೀರ್ಘಕಾಲದಿಂದ ಅರ್ಜಿ ವಿಚಾರಣೆ ನಡೆಯದಿರುವುದಕ್ಕೆ ಅಸಮಾಧಾನಗೊಂಡು 2012ರಲ್ಲಿ ಹೈಕೋರ್ಟ್ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದ ಗುಜರಾತ್ ನ ಟೀ ವ್ಯಾಪಾರಿಯೊಬ್ಬನಿಗೆ ಅಹಮದಾಬಾದ್ ಮ್ಯಾಜಿಸ್ಟೀರಿಯಲ್ ಕೋರ್ಟ್ 18 ತಿಂಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೆಜಿಎಫ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ : ಹೊಂಬಾಳೆ ಫಿಲಂಸ್ ನಿಂದ ರಿಲೀಸ್ ಆಯ್ತು ವಿಡಿಯೋ!
ಭಾರತೀಯ ದಂಡ ಸಂಹಿತೆ ಸೆಕ್ಷನ್ 353ರ ಅಡಿಯಲ್ಲಿ ಆರೋಪಿಸಿರುವಂತೆ ಭವಾನಿದಾಸ್ ಬಾವಾಜಿಯನ್ನು ದೋಷಿ ಎಂದು ಮಿರ್ಜಾಪುರ್ ಗ್ರಾಮೀಣ ನ್ಯಾಯಾಲಯದ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ವಿ.ಎ.ಧಾದಲ್ ಗುರುವಾರ(ಜೂನ್ 03) ತೀರ್ಪು ಪ್ರಕಟಿಸಿದ್ದರು ಎಂದು ವರದಿ ಹೇಳಿದೆ.
ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಬಾವಾಜಿ ಅವರು ತಮ್ಮ ಪ್ರಕರಣ ದೀರ್ಘಕಾಲದಿಂದ ವಿಚಾರಣೆಗೆ ಬಾಕಿ ಇರುವುದರಿಂದ ಹತಾಶೆಗೊಂಡು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದಾಗಿ ತಿಳಿಸಿದ್ದಾರೆಂದು ವಿವರಿಸಿದೆ.
ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವುದು ಅತ್ಯಂತ ಖಂಡನೀಯವಾದ ವಿಚಾರವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ ಮ್ಯಾಜಿಸ್ಟ್ರೇಟ್ ಧಾದಲ್ ಅವರು, ಬಾವಾಜಿಗೆ ಶಿಕ್ಷೆಯಿಂದ ವಿನಾಯ್ತಿ ನೀಡಲು ನಿರಾಕರಿಸಿದರು. ಅಲ್ಲದೇ 18 ತಿಂಗಳ ಸಾಧಾರಣ ಜೈಲುಶಿಕ್ಷೆ ವಿಧಿಸಿದ್ದು, ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಯಾವುದೇ ದಂಡ ವಿಧಿಸಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.