Advertisement

ಗುಜರಾತ್‌-ಹಿಮಾಚಲ ಫ‌ಲಿತಾಂಶ ಸಹಿಸಲಾಗುತ್ತಿಲ್ಲ

05:49 PM Dec 21, 2017 | |

ಶಿವಮೊಗ್ಗ: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಸಹಿಸಿಕೊಳ್ಳಲು ಸಾಧ್ಯವಾಗದೇ ಕಾಂಗ್ರೆಸ್‌ ನಾಯಕರು ಒಂದೊಂದು ರೀತಿ ಹೇಳಿಕೆ ನೀಡತೊಡಗಿದ್ದಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ, ಆಮಿತ್‌ ಶಾ, ಬಿ.ಎಸ್‌. ಯಡಿಯೂರಪ್ಪ ಕುರಿತು ಹಗುರವಾಗಿ ಮಾತುಗಳನ್ನಾಡುತ್ತಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದರು.
ಧರ್ಮ ಹಾಗೂ ಜಾತಿ-ಜಾತಿ ನಡುವೆ ಬಿರುಕು ತಂದರೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಇದ್ದರೆ ಅದರಿಂದ ಮುಖ್ಯಮಂತ್ರಿ
ಸಿದ್ದರಾಮಯ್ಯ ಹೊರ ಬರಬೇಕು. ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ. ನಾವು ಕೂಡ ನಮ್ಮ ಸರ್ಕಾರದಲ್ಲಾದ ಅಭಿವೃದ್ಧಿ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಎದುರಿಸುತ್ತೇವೆ. ಅದು ಬಿಟ್ಟು ಧರ್ಮ ಹಾಗೂ ಜಾತಿ ಜಾತಿ ನಡುವೆ ಬೆಂಕಿ ಹಚ್ಚುವುದನ್ನು ಕಾಂಗ್ರೆಸ್‌ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ಹಿಂದೂ-ಮುಸ್ಲಿಂ, ವೀರಶೈವ- ಲಿಂಗಾಯತ ಎಂದು ಗಲಾಟೆ ಹಚ್ಚಬಾರದು. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಿದರೆ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ. ಕೇವಲ ಓಟು ಪಡೆಯುವ ಉದ್ದೇಶದಿಂದ ಜಾತಿ ರಾಜಕಾರಣ
ಮಾಡಿದರೆ ಸಫಲವಾಗುವುದಿಲ್ಲ. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರಕಿರುವ ಫಲಿತಾಂಶ ಇದಕ್ಕೆ ಸಾಕ್ಷಿ ಎಂದರು.

ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಲಿ: ಜನತೆ ನೀಡಿದ ತೀರ್ಪುಒಪ್ಪಿಕೊಳ್ಳಬೇಕು. ಅದು ಬಿಟ್ಟು ವಿದ್ಯುನ್ಮಾನ ಮತಯಂತ್ರ ದೋಷಪೂರಿತವಾಗಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಮತದಾರರ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒಂದು ಪಕ್ಷ ವಿದ್ಯುನ್ಮಾನ ಮತ ಯಂತ್ರ ದೋಷ ಪೂರಿತವಾಗಿದ್ದರೆ ಗುಜರಾತ್‌ನಲ್ಲಿ 77 ಕ್ಷೇತ್ರ ಹಾಗೂ ಹಿಮಾಚಲ ಪ್ರದೇಶದಲ್ಲಿ 22 ಕ್ಷೇತ್ರ ಅನ್ಯಾಯದಿಂದ ಗೆಲುವು ಸಾಧಿಸಿದ್ದೇವೆ ಎಂದು ಹೇಳಿಕೆ ನೀಡಲಿ ಎಂದು ಸವಾಲು
ಹಾಕಿದರು.

ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಇಲ್ಲೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆದು ಸ್ಪಷ್ಟ ಬಹುಮತ ಗಳಿಸುವುದು ನಿಶ್ಚಿತ. ಬಿ.ಎಸ್‌.ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಿ ಬಿಡುಗಡೆಗೊಳಿಸಿ: ಸಿಎಂ ಸಿದ್ದರಾಮಯ್ಯ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ್ದ 167 ಭರವಸೆಗಳಲ್ಲಿ 150ಕ್ಕೂ ಹೆಚ್ಚು ಭರವಸೆ ಈಡೇರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಈಡೇರಿಸಿರುವ ಭರವಸೆ ಹಾಗೂ
ರಾಜ್ಯ ಸರ್ಕಾರದ ಸಾಧನೆ ಕುರಿತ ಪಟ್ಟಿ ಬಿಡುಗಡೆ ಮಾಡಬೇಕು ಎಂದರು.

ಹಿಂದ ವರ್ಗಕ್ಕೆ ಅನ್ಯಾಯ: ವಿದ್ಯಾಸಿರಿಯೋಜನೆಯಡಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಹಣ ಬಿಡುಗಡೆಯಾಗಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವುದಾಗಿ ತಿಳಿಸಿದ್ದರು. ಇದುವರೆಗೂ ಒಬ್ಬರಿಗೂ ಲ್ಯಾಪ್‌ಟಾಪ್‌
ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು. 

ಬುದ್ಧಿ ಇಲ್ಲವೇ?: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆದಾಡುವ ದೇವರು ಎಂದೇ ಹೇಳಲ್ಪಡುವ ಸಿದ್ಧಗಂಗಾ ಶ್ರೀಗಳ ಮಾತಿಗೆ ನಾವು ಬದ್ಧರಾಗಿದ್ದೇವೆ. ಇದರಲ್ಲಿ ಬಿಜೆಪಿಗೆ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಗಂತೂ ಬುದ್ಧಿ ಇಲ್ಲ. ಲಿಂಗಾಯಿತ ಸಮಾಜ ಒಡೆಯತೊಡಗಿದ್ದಾರೆ. ಎಂ.ಬಿ. ಪಾಟೀಲ, ವಿನಯ್‌ ಕುಲಕರ್ಣಿ, ರಾಯರೆಡ್ಡಿ, ಹೊರಟ್ಟಿ ಇವರಿಗಾದರೂ
ಬುದ್ಧಿ ಇಲ್ಲವೇ? ಬಸವೇಶ್ವರರ ವಿಚಾರಧಾರೆ ಸಮಾಜಕ್ಕೆ ತಿಳಿಸಬೇಕೇ ಹೊರತು ಜಾತಿ ಜಾತಿಯನ್ನು ಒಡೆಯುವ ಪ್ರಯತ್ನ ಯಾರು ನಡೆಸಬಾರದು ಎಂದರು.

ಮಹದಾಯಿ ನದಿ ನೀರು ಹಂಚಿಕೆ ಬಿಕ್ಕಟ್ಟು ಅನೇಕ ವರ್ಷಗಳಿಂದ ಇದೆ. ಇದನ್ನು ಬಗೆಹರಿಸುವ ಪ್ರಯತ್ನವನ್ನೇ ಕಾಂಗ್ರೆಸ್‌ ನಡೆಸಿರಲಿಲ್ಲ. ಇದೀಗ ಬಿಜೆಪಿ ಮೇಲೆ ಇಲ್ಲಸಲ್ಲದ ಆಪಾದನೆ ಮಾಡತೊಡಗಿದೆ. ಬಿಜೆಪಿ ಮಹದಾಯಿ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಸದ್ಯದಲ್ಲೇ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಗುಜರಾತ್‌ ಚುನಾವಣೆಯಲ್ಲಿ ಸಾಕಷ್ಟು ನೋಟ ಮತ ಬಿದ್ದಿವೆ. ಇದು ಯಾರ ವಿರುದ್ಧ ಎಂದು ಹೇಳಲು ಬರುವುದಿಲ್ಲ. ಮತದಾರರಿಗೆ ಯಾವ ಕಾರಣಕ್ಕೆ ಅಸಮಾಧಾನವಾಗಿದೆ ಎಂಬ ಕುರಿತು ಬಿಜೆಪಿ ಚಿಂತನೆ ನಡೆಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ, ವಿಧಾನಪರಿಷತ್‌ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ಪ್ರಮುಖರಾದ ಎಸ್‌.ಎನ್‌. ಚನ್ನಬಸಪ್ಪ, ಎಂ.ಶಂಕರ್‌, ಮಧುಸೂದನ್‌, ಜ್ಞಾನೇಶ್ವರ್‌, ಎನ್‌.ಜೆ. ರಾಜಶೇಕರ್‌, ರತ್ನಾಕರ ಶೆಣೈ, ನಾಗರಾಜ್‌, ಅನಿತಾ ರವಿಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹತ್ತಿವಾದಂತೆ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದು ದೇವಸ್ಥಾನಗಳಿಗೆ
ಎಡತಾಕಿದ್ದಾರೆ. ಪರಿಣಾಮ ಗುಜರಾತ್‌ನಲ್ಲಿ 77 ಸ್ಥಾನ ಗಳಿಸಿದೆ. ಒಂದೆರಡು ತಿಂಗಳು ಮೊದಲೇ ದೇವಸ್ಥಾನಗಳಿಗೆ ಭೇಟಿ ನೀಡುವ
ಸಂಪ್ರದಾಯ ಬೆಳೆಸಿಕೊಂಡಿದ್ದರೆ ಇನ್ನು ಕೆಲವು ಸ್ಥಾನ ದೊರಕುತ್ತಿತ್ತೇನೋ?

ಕೆ.ಎಸ್‌. ಈಶ್ವರಪ್ಪ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next