ಅಹಮದಾಬಾದ್:ನಮ್ಮಿಬ್ಬರ ನಡುವಿನ ಲಿವ್ ಇನ್ ಒಪ್ಪಂದಕ್ಕೆ ಬಲ ನೀಡುವ ನಿಟ್ಟಿನಲ್ಲಿ ಗಂಡನ ಜೊತೆ ಇರುವ ಗೆಳತಿಯನ್ನು ತನ್ನ ವಶಕ್ಕೆ ಕೊಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಿಯಕರನಿಗೆ ಗುಜರಾತ್ ಹೈಕೋರ್ಟ್ 25,000 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ತನ್ನ ಪ್ರಿಯತಮೆಯ ಇಚ್ಛೆಯ ವಿರುದ್ಧವಾಗಿ ಬೇರೊಬ್ಬ ವ್ಯಕ್ತಿಯ ಜೊತೆ ಪೋಷಕರು ಬಲವಂತವಾಗಿ ಮದುವೆ ಮಾಡಿಸಿರುವುದಾಗಿ ದೂರಿರುವ ವ್ಯಕ್ತಿ, ತಾನು ಆಕೆಯ ಜೊತೆ ಸಂಬಂಧ ಹೊಂದಿದ್ದು, ಆಕೆಯನ್ನು ತನ್ನ ವಶಕ್ಕೆ ನೀಡಬೇಕೆಂದು ಹೈಕೋರ್ಟ್ ಕಟಕಟೆ ಏರಿದ್ದ.
ಆಕೆ ಗಂಡನನ್ನು ತ್ಯಜಿಸಲು ಸಿದ್ಧಳಾಗಿದ್ದಾಳೆ!
ನನ್ನ ಪ್ರಿಯತಮೆ ಗಂಡನನ್ನು ತ್ಯಜಿಸಲು ಸಿದ್ಧಳಾಗಿದ್ದಾಳೆ. ಆಕೆ ಈಗ ಗಂಡನಿಂದ ದೂರ ಇದ್ದು, ತವರು ಮನೆಯಲ್ಲಿ ವಾಸಿಸಲು ಬಯಸಿದ್ದಾಳೆ. ಅಲ್ಲದೇ ಆಕೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವ್ಯಕ್ತಿ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
Related Articles
ಏತನ್ಮಧ್ಯೆ ಯುವತಿಯ ಮನೆಯವರು ಆಕೆಯನ್ನು ಮತ್ತೆ ಗಂಡನ ಬಳಿ ಕರೆತಂದು ಬಿಟ್ಟು ಹೋಗಿದ್ದರು. ಇದರಿಂದ ಅಸಮಾಧಾನಗೊಂಡ ಪ್ರಿಯಕರ, ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತನ್ನ ಪ್ರಿಯತಮೆಯನ್ನು ಆಕೆಯ ಇಚ್ಛೆಯ ವಿರುದ್ಧವಾಗಿ ಗಂಡನ ಮನೆಯಲ್ಲಿ ಇರಿಸಿರುವುದಾಗಿ ಆರೋಪಿಸಿದ್ದ.
ಈ ಅರ್ಜಿಗೆ ಸರ್ಕಾರಿ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಅರ್ಜಿ ಸಲ್ಲಿಸಲು ವ್ಯಕ್ತಿಗೆ ಯಾವುದೇ ಅಧಿಕಾರ ಇಲ್ಲ ಎಂದು ವಾದ ಮಂಡಿಸಿದ್ದರು. ಒಂದು ವೇಳೆ ಮಹಿಳೆ ಗಂಡನ ಜೊತೆ ಇದ್ದಾಳೆ ಎಂದಾದರೆ ಅದು ಕಾನೂನು ಬಾಹಿರವಲ್ಲ ಎಂದು ವಾದಿಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ಜಸ್ಟೀಸ್ ವಿ.ಎಂ.ಪಾಂಚೋಲಿ ಮತ್ತು ಜಸ್ಟೀಸ್ ಎಚ್.ಎಂ.ಪ್ರಚ್ಛಾಕ್ ಅವರು, ಮಹಿಳೆಯ ಜೊತೆ ಅರ್ಜಿದಾರರು ವಿವಾಹವಾಗಿದ್ದಾರೆಯೇ. ಅಷ್ಟೇ ಅಲ್ಲ ಆಕೆ ಈವರೆಗೂ ತನ್ನ ಗಂಡನಿನಿಂದ ವಿಚ್ಛೇದನ ಕೇಳಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿ, ಇಂತಹ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ವಜಾಗೊಳಿಸಿದ್ದು, ಅರ್ಜಿದಾರ ವ್ಯಕ್ತಿಗೆ 25,000 ರೂಪಾಯಿ ದಂಡ ವಿಧಿಸಿದೆ.