Advertisement

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

01:20 AM May 27, 2024 | Team Udayavani |

ಅಹ್ಮದಾಬಾದ್‌: 33 ಜನರ ಸಾವಿಗೆ ಕಾರಣವಾದ ರಾಜಕೋಟ್‌ ಗೇಮ್‌ ಜೋನ್‌ ಬೆಂಕಿ ಅವಘಡ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಗುಜರಾತ್‌ ಹೈಕೋರ್ಟ್‌, ಇದು ಮಾನವ ನಿರ್ಮಿತ ದುರಂತ ಎಂದು ಹೇಳಿದೆ. ಈ ಮಧ್ಯೆ, ಗೇಮಿಂಗ್‌ ಜೋನ್‌ 6 ಪಾಲುದಾರರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

Advertisement

ಈ ರೀತಿಯ ಗೇಮಿಂಗ್‌ ಜೋನ್‌ಗಳು ಮತ್ತು ಮನೋರಂಜನ ಕೇಂದ್ರ ಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಇಲ್ಲದೇ ನಡೆಯುತ್ತಿವೆ ಎಂದು ನ್ಯಾ| ಬಿರೇನ್‌ ವೈಷ್ಣವ್‌ ಮತ್ತು ನ್ಯಾ| ದೇವನ್‌ ದೇಸಾಯಿ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜತೆಗೆ ಅಹ್ಮದಾಬಾದ್‌, ವಡೋದರಾ, ಸೂರತ್‌ ಮತ್ತು ರಾಜಕೋಟ್‌ ಮುನ್ಸಿಪಲ್‌ ಕಾರ್ಪೋರೇಶನ್‌ ಅಧಿಕಾರಿಗಳಿಗೆ ಸೋಮವಾರ ಹಾಜರಾಗುವಂತೆ ಸೂಚಿಸಿದೆ.

ಸಿಎಂ ಭೇಟಿ: ದುರಂತ ನಡೆದ ಸ್ಥಳಕ್ಕೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಹಿರಿಯ ಅಧಿಕಾರಿಗಳ ಜತೆಗೂಡಿ ಭೇಟಿ ನೀಡಿದರು. ಸುಟ್ಟು ಕರಕಲಾಗಿರುವ ದೇಹಗಳನ್ನು ಗುರುತಿಸುವ ನಿಟ್ಟಿನಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಬಗ್ಗೆ ಅವರಿಗೆ ಅಧಿಕಾರಿಗಳು ವಿವರಿಸಿದ್ದಾರೆ.

ಒಂದೇ ನಿರ್ಗಮನ ಬಾಗಿಲು, 3,500 ಲೀ. ಇಂಧನ ಸಂಗ್ರಹ!
ಬೆಂಕಿ ಅವಘಡಕ್ಕೀಡಾದ ರಾಜಕೋಟ್‌ನ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಪರವಾನಿಗೆ ಹಾಗೂ ಎನ್‌ಒಸಿ ಕೂಡ ಇರಲಿಲ್ಲ. 99 ರೂ. ಟಿಕೆಟ್‌ ರಿಯಾಯಿತಿ ನೀಡಿದ್ದರಿಂದ ಹೆಚ್ಚಿನ ಜನರು ಕೂಡ ಬಂದಿದ್ದರು. ವಿಶೇಷ ಎಂದರೆ, ಈ ಗೇಮಿಂಗ್‌ ಜೋನ್‌ನಲ್ಲಿ ಒಂದೇ ಹೊರ ಹೋಗುವ ಬಾಗಿಲು ಇತ್ತು. ಜನರೇಟರ್‌ಗಳಿಗಾಗಿ 3,500 ಲೀ. ಇಂಧನವನ್ನು ಸಂಗ್ರಹಿಸಿಡಲಾಗಿತ್ತು. ಇದು ಕೂಡ ಬೆಂಕಿಯು ತೀವ್ರತೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಶಾರ್ಟ್‌ ಸರ್ಕಿಟ್‌ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆಯಾ ದರೂ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಗೇಮಿಂಗ್‌ ಸೆಂಟರ್‌ಗೆ ಅಗ್ನಿಶಾಮಕ ಇಲಾಖೆ ಯಿಂದ ಪರವಾನಿಗೆ ಪಡೆದುಕೊಂಡಿಲ್ಲದ ಅಂಶ ಕೂಡ ಬೆಳಕಿಗೆ ಬಂದಿದೆ.

2 ಲಕ್ಷ ರೂ. ಪರಿಹಾರ ಪ್ರಕಟಿಸಿದ ಪ್ರಧಾನಿ ಮೋದಿ
ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ದಲ್ಲಿ ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಕಚೇರಿ ಟ್ವೀಟ್‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next