ನವದೆಹಲಿ:ಧಾರಾಕಾರ ಮಳೆ ಸುರಿದ ಪರಿಣಾಮ ಗುಜರಾತ್ ನ ರಾಜ್ ಕೋಟ್ ಮತ್ತು ಜಾಮ್ ನಗರದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಭಾರತೀಯ ವಾಯುಸೇನಾ ಪಡೆ, ಭಾರತೀಯ ನೌಕಾಪಡೆ ಹಾಗೂ ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ! ಸೋದರ ಮಾವನಿಂದಲೇ ಕೃತ್ಯ
ಪ್ರವಾಹದಲ್ಲಿ ಸಿಲುಕಿರುವ ಸುಮಾರು 200ಕ್ಕೂ ಅಧಿಕ ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಏಳು ಸಾವಿರಕ್ಕೂ ಹೆಚ್ಚಿನ ಮಂದಿಯನ್ನು ಎರಡು ಜಿಲ್ಲೆಗಳಲ್ಲಿರುವ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಜಾಮ್ ನಗರದ ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 22 ಮಂದಿಯನ್ನು ಐಎಎಫ್ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಎರಡು ಜಿಲ್ಲೆಗಳಿಂದ ಸುಮಾರು 150 ಜನರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ ಕೋಟ್ ನ ಪ್ರವಾಹಪೀಡಿತ ಏಳು ಗ್ರಾಮಗಳಿಂದ ಒಟ್ಟು 56 ಜನರನ್ನು ಐಎಎಫ್ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಗಳ ಶೋಧ ಕಾರ್ಯಾಚರಣೆಯಲ್ಲಿ ನೌಕಾಪಡೆ ತಂಡ ನೆರವು ನೀಡುತ್ತಿರುವುದಾಗಿ ವರದಿ ಹೇಳಿದೆ.
ಸೋಮವಾರ ರಾಜ್ ಕೋಟ್ ನಲ್ಲಿ ಕಾರೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದಾಗಿ ಜಿಲ್ಲಾಧಿಕಾರಿ ಅರುಣ್ ಮಹೇಶ್ ಬಾಬು ತಿಳಿಸಿದ್ದಾರೆ. ಜಾಮ್ ನಗರ್ ಮತ್ತು ರಾಜ್ ಕೋಟ್ ನಲ್ಲಿ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.