ಗಾಂಧಿನಗರ: ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಪಕ್ಷ ಕೈಗೊಂಡ ನಿಲುವಿನಿಂದ ಬೇಸರಗೊಂಡ ಗುಜರಾತ್ ನ ಹಿರಿಯ ಕಾಂಗ್ರೆಸ್ ಶಾಸಕ ಸಿಜೆ ಚಾವಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಜಾಪುರ ವಿಧಾನಸಭೆ ಕ್ಷೇತ್ರದ ಮೂರು ಬಾರಿಯ ಶಾಸಕ ಚಾವಡಾ ಅವರು ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಗಾಂಧಿನಗರದಲ್ಲಿ ತಮ್ಮ ರಾಜೀನಾಮೆ ನೀಡಿದರು.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿದ ಸಿಜೆ ಚಾವಡಾ, ನಾನು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇನೆ, ನಾನು 25 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೇನೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಿಂದ ಇಡೀ ದೇಶದ ಜನರು ಸಂತೋಷಪಡುತ್ತಿದ್ದಾರೆ. ಜನರಲ್ಲಿ ಸಂತಸದ ಅಲೆಯಿದೆ, ಆ ಸಂತೋಷದ ಅಲೆಯ ಭಾಗವಾಗದೆ, ಈ ಪಕ್ಷ (ಕಾಂಗ್ರೆಸ್) ತೋರಿದ ವಿಧಾನವೇ ಅಸಮಾಧಾನಕ್ಕೆ ಕಾರಣವಾಗಿದೆ” ಎಂದಿದ್ದಾರೆ.
“ಗುಜರಾತ್ ನ ಇಬ್ಬರು ದೊಡ್ಡ ನಾಯಕರಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೆಲಸಗಳು ಮತ್ತು ನೀತಿಗಳನ್ನು ನಾವು ಬೆಂಬಲಿಸಬೇಕು. ಆದರೆ ಕಾಂಗ್ರೆಸ್ ನಲ್ಲಿದ್ದಾಗ ನಾನು ಅದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡಿದ್ದೇನೆ” ಎಂದು ಅವರು ಹೇಳಿದರು.
ಚಾವಡಾ ಅವರ ನಿರ್ಗಮನದೊಂದಿಗೆ, 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈಗ 15 ಸದಸ್ಯಬಲಕ್ಕೆ ಕುಸಿದಿದೆ. ಇದಕ್ಕೂ ಮೊದಲು, ಆನಂದ್ ಜಿಲ್ಲೆಯ ಖಂಭತ್ ನ ಕಾಂಗ್ರೆಸ್ ಶಾಸಕ ಚಿರಾಗ್ ಪಟೇಲ್ ಕೂಡ ವಿಧಾನಸಭೆಗೆ ರಾಜೀನಾಮೆ ನೀಡಿದ್ದರು.