ಉಡುಪಿ: ಬೀಚ್ ಸ್ವಚ್ಛತೆ, ಬೇಟಿ ಬಚಾವೊ, ಬೇಟಿ ಪಡಾವೊ ಸೇರಿದಂತೆ ವಿವಿಧ ವಿಷಯದ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ 12 ಮಂದಿ ತಂಡವೊಂದು ಪಾಕಿಸ್ಥಾನದ ಗಡಿ ಭಾಗದಿಂದ ರಾಮೇಶ್ವರದ ಧನುಷ್ಕೋಟಿಗೆ ಹೊರಟಿದ್ದು ಹೋಗುವ ದಾರಿಯಲ್ಲಿ ತಂಡ ಶನಿವಾರ ಉಡುಪಿಗೆ ಆಗಮಿಸಿದೆ.
ಉಡುಪಿ ಕಿದಿಯೂರು ನಿವಾಸಿ ರಘುಪತಿ ಜಿ.ಪಿ. ಆಚಾರ್ಯ ನೇತೃತ್ವದ ತಂಡ ನ.11ರಂದು ಪಾಕಿಸ್ಥಾನ ಗಡಿ ಪ್ರದೇಶವಾದ ಗುಜರಾತ್‌ನ ಕೋಟೇಶ್ವರದಿಂದ ಹೊರಟಿತ್ತು. ರಾಮೇಶ್ವರದ ಧನುಷ್ಕೋಟಿ ವರೆಗೆ ಸುಮಾರು 6,800 ಕಿ. ಮೀ. ದೂರವನ್ನು ಕಾರು ಪ್ರಯಾಣದ ಮೂಲಕ ಕ್ರಮಿಸಬೇಕಾಗುತ್ತದೆ. ಈ ನಡುವೆ ತಂಗುವ ಸ್ಥಳಗಳಲ್ಲಿ ಅಭಿಯಾನದ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಅರಿವು ಮೂಡಿಸುವ ಪ್ರಯತ್ನ ಈ ತಂಡ ಸಂಚರಿಸುವ ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳ ಶಾಲೆ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಪರಿಸರ ಸಂರಕ್ಷಣೆ, ಸಂಚಾರ ನಿಯಮ ಪಾಲನೆ ಹಾಗೂ ನಿಯಮ ಉಲ್ಲಂಘನೆಯಿಂದಾಗುವ ಸಮಸ್ಯೆಗಳು ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡುತ್ತಿದೆ. ರಾಜ್ಯದ ವಿವಿಧ ಬೀಚ್‌ಗಳಿಗೆ ತೆರಳಿ ಜನರಲ್ಲಿ ಬೀಚ್ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ಭೇಟಿ ಕುಸಿಯುತ್ತಿರುವ ಹೆಣ್ಣು ಮಕ್ಕಳ ಜನನ ಪ್ರಮಾಣದ ಕುರಿತು ಅರಿವು ಮೂಡಿಸಿ, ಅವರಿಗೆ ಶಿಕ್ಷಣ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿ ಕೊಳ್ಳುತ್ತಿದೆ. ಇದಕ್ಕೆ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎನ್ನುತ್ತಾರೆ ತಂಡ ಸದಸ್ಯರು.
ವಾಟ್ಸ್‌ಪ್‌ಗ್ರೂಪ್ ಸಹಾಯ
ಪಶ್ಚಿಮ ಕರಾವಳಿಯತ್ತ ಪ್ರವಾಸ ಮಾಡಬೇಕು ಎನ್ನುವ ಹಂಬಲ ಇತ್ತು. ಮೋಜಿಗೆ ಸೀಮಿತವಾಗದೆ ಸಮಾಜಕ್ಕೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ 2 ವರ್ಷದಿಂದ ಪ್ರವಾಸದ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ವಾಟ್ಸ್‌ಪ್ ಗ್ರೂಪ್ ರಚಿಸಿ ಅಭಿಪ್ರಾಯ ಹಂಚಿಕೊಂಡಿದ್ದೇವೆ. 40 ಜನರು ಬರಲು ಒಪ್ಪಿಗೆ ಸೂಚಿಸಿದರು. ಕಾರಣಾಂತರದಿಂದ 12 ಜನರ ತಂಡ 13ದಿನ, 6 ರಾಜ್ಯವನ್ನು ರಸ್ತೆಯ ಮೂಲಕ ಮೂರು ಕಾರು ಮೂಲಕ ಕ್ರಮಿಸುವ ನಿರ್ಧಾರ ಮಾಡಿದ್ದು, ಅದರಂತೆ ಊಟ, ತಿಂಡಿ, ರೂಮ್, ಪೆಟ್ರೋಲ್, ಟೋಲ್ ಬಿಲ್ ಸೇರಿದಂತೆ ತಲಾ ಒಬ್ಬ ಸದಸ್ಯನಿಗೆ 25,000 ರೂ. ನಂತೆ 12 ಮಂದಿಯಿಂದ 3 ಲ.ರೂ. ಸಂಗ್ರಹಿಸಲಾಗಿದೆ ಎಂದು ರಘುಪತಿ ಜಿ.ಪಿ. ಆಚಾರ್ಯ ಮಾಹಿತಿ ನೀಡಿದರು.
ಹೊಸ ಜಾಗ ಹಾಗೂ ಜನರು ಜತೆಗೆಗಿನ ಒಡನಾಟ ವಿಶೇಷವಾದ ಅನುಭವವನ್ನು ನೀಡಿದೆ. ಇವತ್ತು ಉಡುಪಿಯಲ್ಲಿ 24 ಬಗೆಯ ಆಹಾರವನ್ನು ಸೇವಿಸಿದ್ದೇವೆ. ಇಲ್ಲಿ ಸಂಸ್ಕೃತಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಈ ಪ್ರವಾಸದಲ್ಲಿ ಸಂಗ್ರಹಿಸಲಾದ ಅನುಭವ ಹಾಗೂ ಜ್ಞಾನವನ್ನು ಮುಂದಿನ ದಿನದಲ್ಲಿ ಡಾಕ್ಯೂಮೆಂಟರಿ ರೂಪದಲ್ಲಿ ಹೊರತರಲು ಪ್ರಯತ್ನಿಸಲಾಗುತ್ತದೆ.
-ಕೇತನ್, ಪ್ರವಾಸಿ ತಂಡದ ಸದಸ್ಯ