ಗುಜರಾತ್: ಕಳೆದ ಕೆಲ ದಿನಗಳಿಂದ ತಿನ್ನುವ ಆಹಾರದಲ್ಲಿ ನಾನಾ ರೀತಿಯ ವಸ್ತುಗಳು ಪತ್ತೆ ಆಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ಗುಜರಾತಿನಲ್ಲಿ ನಡೆದಿದೆ.
ಚಿಪ್ಸ್ ಪ್ಯಾಕೆಟಿನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿರುವುದು ಗುಜರಾತಿನ ಜಾಮ್‌ನಗರದ ಪುಷ್ಕರಧಾಮ್ ಸೊಸೈಟಿಯ ನಿವಾಸಿಗಳನ್ನು ಆತಂಕಕ್ಕೀಡುಮಾಡಿದೆ.
ಪುಷ್ಕರ್ಧಾಮ್ ಸೊಸೈಟಿಯಲ್ಲಿ ವಾಸಿಸುವ ಜಸ್ಮೀತ್ ಪಟೇಲ್ ಎನ್ನುವವರು ಮಂಗಳವಾರ(ಜೂ.18 ರಂದು) ವೇಫರ್(ಚಿಪ್ಸ್) ಪ್ಯಾಕೆಟ್ ಖರೀದಿಸಿದ್ದರು. ಅರ್ಧದ್ದಷ್ಟು ಚಿಪ್ಸ್ ನ್ನು ರಾತ್ರಿಯೇ ತಿಂದು, ಮರುದಿನ ಬೆಳಗ್ಗೆ ಮತ್ತೆ ಚಿಪ್ಸ್ ತಿನ್ನಲು ಹೋದಾಗ ಪ್ಯಾಕೆಟ್ ಯೊಳಗೆ ಸತ್ತ ಕಪ್ಪೆ ಪತ್ತೆಯಾಗಿದೆ. ಇದನ್ನು ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಾರೆ.
ಜಸ್ಮೀತ್ ಪಟೇಲ್ ಕೂಡಲೇ ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ ಆಹಾರ ಶಾಖೆಯನ್ನು ಸಂಪರ್ಕಿಸಿ ಘಟನೆ ಬಗ್ಗೆ ವಿವರವಾಗಿ ಹೇಳಿದ್ದಾರೆ.
ತನಿಖೆಯ ಭಾಗವಾಗಿ ವೇಫರ್ ಪ್ಯಾಕೆಟ್‌ನ ಉತ್ಪಾದನಾ ಬ್ಯಾಚ್‌ನ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮುಂಬಯಿ ವೈದ್ಯರೊಬ್ಬರ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಇದಲ್ಲದೆ ಇತ್ತೀಚೆಗೆ ಹರ್ಷಿಸ್ ಕಂಪೆನಿಯ ಚಾಕೊಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆಯಾಗಿರುವ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದೆ.