ಸೂರತ್: ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪದಲ್ಲಿ ಬಂಧಿತನಾದ 28 ದಿನಗಳಲ್ಲಿಯೇ ಆರೋಪಿ ವಲಸೆ ಕಾರ್ಮಿಕ(35ವರ್ಷ)ನಿಗೆ ಗುಜರಾತ್ ನ ಪೋಕ್ಸೋ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ್ದು, ಮಂಗಳವಾರ(ಡಿಸೆಂಬರ್ 07) ಶಿಕ್ಷೆಯ ಪ್ರಮಾಣ ಘೋಷಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ
ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿ ಗುಡ್ಡು ಯಾದವ್ ವಿರುದ್ಧ ಕಿಡ್ನಾಪ್, ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ಪೋಕ್ಸೋ ವಿಶೇಷ ಕೋರ್ಟ್ ಜಡ್ಜ್ ಪಿ.ಎಸ್.ಕಾಲಾ ಅವರು ಆರೋಪಿ ಯಾದವ್ ದೋಷಿ ಎಂದು ತೀರ್ಪು ನೀಡಿದ್ದರು.
ಬಿಹಾರ ಮೂಲದ ಗುಡ್ಡು ಯಾದವ್ ಗುಜರಾತ್ ನ ಸೂರತ್ ನಗರದ ಪಂಡೇಸರಾ ಪ್ರದೇಶದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ವಾಸವಾಗಿದ್ದ. ಆರೋಪಿ ಯಾದವ್ ಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ನಯನ್ ಸುಖಾಂಡವಾಲಾ ವಾದ ಮಂಡಿಸುವ ವೇಳೆ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತನ್ನ ಕಕ್ಷಿದಾರನಿಗೆ ಮರಣದಂಡನೆ ಶಿಕ್ಷೆ ವಿಧಿಸಬಾರದು ಎಂದು ಯಾದವ್ ಪರ ವಕೀಲ ವಾದ ಮಂಡಿಸಿರುವುದಾಗಿ ವರದಿ ಹೇಳಿದೆ.
ಘಟನೆ ವಿವರ:
ನವೆಂಬರ್ 4ರಂದು ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಯಾದವ್, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದಿದ್ದ. ನವೆಂಬರ್ 7ರಂದು ಫ್ಯಾಕ್ಟರಿ ಸಮೀಪ ಮಗುವಿನ ಶವ ಪತ್ತೆಯಾಗಿತ್ತು. ಬಳಿಕ ಹಲವಾರು ಸಿಸಿಟಿವಿ ಫೂಟೇಜ್ ಪರಿಶೀಲನೆ, ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ನವೆಂಬರ್ 9ರಂದು ಯಾದವ್ ನನ್ನು ಬಂಧಿಸಿದ್ದರು. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ನ್ಯಾಯಕೊಡಿಸುವ ನಿಟ್ಟಿನಲ್ಲಿ ಪಂಡೇಸರಾ ಪೊಲೀಸರು ಏಳು ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಕೂಡಾ 43 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಯಾದವ್ ಬಂಧನವಾದ 28 ದಿನಗಳಲ್ಲಿಯೇ ದೋಷಿ ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.