ಗುಜರಾತ್: ಅಮೆರಿಕ ಸುತ್ತುವ ಕನಸು ಕಂಡಿದ್ದ ದಂಪತಿಯೊಂದು ಇರಾನ್ ನಲ್ಲಿ ಪಾಕ್ ಏಜೆಂಟ್ ಕೈಯಲ್ಲಿ ಸಿಲುಕಿಕೊಂಡು ಒತ್ತೆಯಾಳು ಆಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಈ ಸಂಬಂಧ ನರೋಡಾ ಪ್ರದೇಶದ ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಹಮದಾಬಾದ್ ನಗರ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ವಿವರ: ಗುಜರಾತ್ ನರೋಡಾ ಮೂಲದ ಪಂಕಜ್ ಪಟೇಲ್ – ನಿಶಾ ಪಟೇಲ್ ದಂಪತಿ ಅಕ್ರಮವಾಗಿ ಅಮೆರಿಕ ದೇಶ ಪ್ರವೇಶಿಸಿ ಸುತ್ತುವ ಯೋಜನೆಯನ್ನು ಹಾಕಿಕೊಂಡಿದ್ದರು. ಈ ಸಂಬಂಧ ಹೈದರಾಬಾದ್ ಮೂಲದ ಏಜೆಂಟ್ ಯೊಬ್ಬರು ದಂಪತಿಗೆ ವಿಮಾನದ ಟಿಕೆಟ್ ಬುಕ್ ಮಾಡಿಕೊಟ್ಟಿದ್ದರು. ಏಜೆಂಟ್ ನ ಯೋಜನೆಯ ಪ್ರಕಾರ ದಂಪತಿ ಇರಾನ್‌ನ ಟೆಹ್ರಾನ್‌ಗೆ ಬಂದು ಇಳಿದಿದ್ದಾರೆ. ಇದಾದ ಬಳಿಕ ದಂಪತಿಯನ್ನು ಪಾಕಿಸ್ತಾನಿ ಏಜೆಂಟ್ ಯೊಬ್ಬರು ಹೋಟೆಲ್‌ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಇದಾದ ನಂತರ ದಂಪತಿಗೆ ಪಾಕಿಸ್ತಾನಿ ಏಜೆಂಟ್ ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿದ್ದಾರೆ. ಪಂಕಜ್ ಅವರಿಗೆ ಏಜೆಂಟ್ ಹಾಗೂ ಆತನ ಸಹಚರರು ಥಳಿಸಿದ್ದಾರೆ. ಥಳಿಸಿದ ವಿಡಿಯೋವನ್ನು ದಂಪತಿಯ ಕುಟುಂಬಸ್ಥರಿಗೆ ಕಳುಹಿಸಿ ದೊಡ್ಡಮಟ್ಟದ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಘಟನೆ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯು ದೇಶದ ಹೊರಗೆ ನಡೆದಿರುವುದರಿಂದ, ಅಪರಾಧ ವಿಭಾಗವು ಪಂಕಜ್ ಪಟೇಲ್ ಮತ್ತು ಅವರ ಪತ್ನಿ ನಿಶಾ ಪಟೇಲ್ ಅವರನ್ನು ಬಿಡುಗಡೆ ಮಾಡಲು ಎಲ್ಲಾ ವಿವರಗಳೊಂದಿಗೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.