ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಗುಜರಾತ್‌ನಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ಅಲ್ಲಿನ ಶಾಸಕರಲ್ಲಿ ಕೆಲವರು ವಾಪಸ್ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ಉಂಟಾಗಿದೆ. ಇಂಥ ವೇಳೆಯಲ್ಲಿ ಜನರ ಜತೆಗಿರಬೇಕಾದ ನಾವು ರೆಸಾರ್ಟ್‌ನಲ್ಲಿ ಕಾಲ ಕಳೆಯುತ್ತಿರುವುದರಿಂದ ಜನರ ದೃಷ್ಟಿಯಲ್ಲಿ ಕೆಟ್ಟ ಭಾವನೆ ಬರುವಂತಾಗಿದೆ. ಹೀಗಾಗಿ ಪ್ರವಾಹ ಪೀಡಿತ ಕ್ಷೇತ್ರಗಳ ಶಾಸಕರನ್ನಾದರೂ ವಾಪಸ್ ಕಳುಹಿಸಿ ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಆದರೆ ಎಷ್ಟು ಮಂದಿ ಈ ರೀತಿ ಆಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿ ಗೊತ್ತಾಗಿಲ್ಲ.
ಇದೇ ವೇಳೆ, ವೈಭವದ ರೆಸಾರ್ಟ್‌ನಲ್ಲಿ ಕಾಲ ಕಳೆಯುತ್ತಿರುವ ಶಾಸಕರ ಖರ್ಚು ವೆಚ್ಚ ನೋಡುತ್ತಿರುವವರು ಯಾರು ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ. ಶಾಸಕರ ಸಂಪೂರ್ಣ ವೆಚ್ಚವನ್ನು ಗುಜರಾತ್ ಕಾಂಗ್ರೆಸ್ ಘಟಕವೇ ನೋಡಿಕೊಳ್ಳುತ್ತಿದೆ.
ಕರ್ನಾಟಕ ಸರ್ಕಾರದ ವತಿಯಿಂದ ಯಾವುದೇ ಹಣ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರೆಸಾರ್ಟ್‌ಗೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿರುವ ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹಿಂದೆ ಹೋಗಿರಲಿಲ್ಲವೇ ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ, ಗುಜರಾತ್ ಶಾಸಕಿ ಕಾಮಿನಿಬಾ ರಾಥೋಡ್ ಅವರ 10 ವರ್ಷದ ಮಗನ ಹುಟ್ಟುಹಬ್ಬವನ್ನು ಸಡಗರದಿಂದಲೇ ಆಚರಿಸಲಾಗಿದೆ. ರೆಸಾರ್ಟ್‌ನಲ್ಲೇ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಗಿದೆ. ಈ ವೇಳೆ ಶಿವಕುಮಾರ್, ಶಾಸಕಿ ಪುತ್ರನಿಗೆ ಉಂಗುರವನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದ್ದು, ಪ್ರತಿಯೊಬ್ಬರಿಗೆ 15 ಕೋಟಿ ರೂ.ಆಮಿಷ ಒಡ್ಡಲಾಗಿದೆ. ಹೀಗಾಗಿಯೇ ಅವರು ಕರ್ನಾಟಕಕ್ಕೆ ಹೋಗಿದ್ದಾರೆ. ಬೆಂಬಲ ನೀಡುವಂತೆ ಪಕ್ಷದ ಶಾಸಕರಿಗೆ ಒತ್ತಡ ಹೇರಲಾಗುತ್ತಿದೆ.
– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ