ಗುಜರಾತ್(ಗಾಂಧಿನಗರ್): ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಕೂಡಾ ಗರಿಗೆದರಿದ್ದು, ಗುಜರಾತ್ ಶಾಸಕಿ ಆಶಾ ಪಟೇಲ್ ಕಾಂಗ್ರೆಸ್ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಗುಜರಾತ್ ನ ಮೆಹಶಾನಾ ಜಿಲ್ಲೆಯ ಉನ್ಜಾಹ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಜೊತೆ ಮಾತುಕತೆ ನಡೆಸಿದ 3 ದಿನಗಳ ಬಳಿಕ ಶಾಸಕಿ ಆಶಾ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ರಾಜೀನಾಮೆ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಆಶಾ ಅವರ ಕಚೇರಿಯ ಮೇಲೆ ಗುಂಪೊಂದು ದಾಳಿ ನಡೆಸಿದೆ. ವಿಷಯ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಬಿಗಿ ಬಂದೋಬಸ್ತ್ ನೀಡಿದೆ ಎಂದು ವರದಿ ತಿಳಿಸಿದೆ.
ಮೀಸಲಾತಿ ತರುವ ಮೂಲಕ ಜಾತಿಗಳನ್ನು ಒಗ್ಗೂಡಿಸುತ್ತಿದ್ದೀರಿ. ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆಯಿಂದ ಬೇಸತ್ತು ತಾವು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಆಶಾ ಪಟೇಲ್ ಹೇಳಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೂ ಕೂಡಾ ಪತ್ರ ಬರೆದು ವಿವರಿಸಿದ್ದಾರೆ.
ಆಶಾ ಪಟೇಲ್ ಅವರು ಪತೇದಾರ್ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಷ್ಟೇ ಅಲ್ಲ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಅಭ್ಯರ್ಥಿ ನಾರಾಯಣ್ ಪಟೇಲ್ ಅವರನ್ನು 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 1972ರ ಬಳಿಕ ಕಾಂಗ್ರೆಸ್ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು,