ಜಾಮ್‌ನಗರ(ಗುಜರಾತ್): ಜಾಮ್‌ನಗರದಲ್ಲಿ ಶುಕ್ರವಾರ 3 ಅಂತಸ್ತಿನ ಕಟ್ಟಡ ಕುಸಿದು ಒಂದು ಮಗು ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಒಟ್ಟು 10 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಈವರೆಗೆ ನಾಲ್ವರನ್ನು ರಕ್ಷಿಸಲಾಗಿದೆ.
ಐದಕ್ಕೂ ಹೆಚ್ಚು ಜನರನ್ನು ತತ್ ಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಕಟ್ಟಡವು 30 ವರ್ಷಗಳಷ್ಟು ಹಳೆಯದಾಗಿದೆ.
ಸಾಧನಾ ಕಾಲೋನಿ ಪ್ರದೇಶದಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡ ಸಂಜೆ ಕುಸಿದಿದೆ. ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಸುಮಾರು ಮೂರು ದಶಕಗಳ ಹಿಂದೆ ಗುಜರಾತ್ ಹೌಸಿಂಗ್ ಬೋರ್ಡ್ ಈ ಕಟ್ಟಡವನ್ನು ನಿರ್ಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಮ್‌ನಗರ ಪಾಲಿಕೆ ಆಯುಕ್ತ ಡಿಎನ್ ಮೋದಿ, ಹಿರಿಯ ನಾಗರಿಕ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ದಿವ್ಯೇಶ್ ಅಕ್ಬರಿ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಸಂಜೆ 6 ಗಂಟೆ ಸುಮಾರಿಗೆ ನಿವಾಸಿಗಳು ಒಳಗಿರುವಾಗಲೇ ಕುಸಿದು ಬಿದ್ದಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.