ಮುಂಬಯಿ: ಹೇಗೆ ಉದಾರ ಮನಸ್ಸಿನಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೋ ಅಂತೆಯೇ ತಮ್ಮೆಲ್ಲರ ಸಹಯೋಗದಿಂದ ಸಮುದಾಯದ ಉನ್ನತೀಕರಣ ಸಾಧ್ಯ ವಾಗಿದೆ. ಜಯ ಸುವರ್ಣರು ಭಾರತ್ ಬ್ಯಾಂಕಿನ ಮೂಲಕ ಬಿಲ್ಲವ ಸಮಾಜವನ್ನು ರಾಷ್ಟ್ರ ಮಾನ್ಯತೆಗೆ ಏರಿಸಿದ್ದಾರೆ. ಅವರ ಸಮಾಜಮುಖೀ ಚಿಂತನೆಗಳಿಂದ ಸಮಾಜೋದ್ಧಾರ ಸಾಧ್ಯವಾಗಿದೆ. ನಾವು ಸ್ವಸಮಾಜದಂತೆ ಅನ್ಯ ಸಮಾಜವನ್ನು ಗೌರವಿಸಿ, ಪ್ರೀತಿಸಿ ಸಾಮರಸ್ಯದಿಂದ ಬಾಳಿದಾಗ ಮನುಷ್ಯ ಜೀವನ ಹಸನವಾಗುವುದು. ಬಿಲ್ಲವರು ಮೂಢನಂಬಿಕೆಯಿಂದ ಮುಕ್ತರಾಗಬೇಕು. ಆವಾಗಲೇ ಬಿಲ್ಲವರು ಬಲಿಷ್ಠರಾಗುತ್ತಾರೆ. ದೈವ ದೇವರುಗಳನ್ನು ಬೆಳ್ಳಿ ಸ್ವರ್ಣದಿಂದ ಅಲಂಕರಿಸುವ ಬದಲು ನಿರ್ಗತಿಕರ ಪಾಲಿಗೆ ಆಶ್ರಯ ದಾತರಾಗಬೇಕು. ಅದೇ ಜನಾರ್ದನ ಸೇವೆ, ಜನತಾ ಸೇವೆಯಾಗಿದೆ ಎಂದು ಬಿಲ್ಲವರ ಅಸೋ. ಮುಂಬಯಿ ಅಧ್ಯಕ್ಷ ಚಂದ್ರಶೇ ಖರ ಎಸ್. ಪೂಜಾರಿ ನುಡಿದರು.
ಅ. 21ರಂದು ಪೂರ್ವಾಹ್ನ ಗುಜರಾತ್‌ನ ಸೂರತ್ ಜಿಲ್ಲೆಯ ವರಛಾ ನಗರದ ಪಾಟೇಲ್‌ವಾಡಿಯ ಹರೇಕೃಷ್ಣ ಸಭಾಗೃಹದಲ್ಲಿ ನಡೆದ ಗುಜರಾತ್ ಬಿಲ್ಲವ ಸಂಘದ ಸೂರತ್ ಶಾಖೆಯ ವಾರ್ಷಿಕೋತ್ಸವ ಮತ್ತು ಕೋಟಿ-ಚೆನ್ನಯ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಿತಿಯ ಯಶಸ್ಸಿಗೆ ಶುಭಹಾರೈಸಿದರು.
ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಸಿ. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಹರೀಶ್ ಪೂಜಾರಿ ಅಂಕ್ಲೇಶ್ವರ, ಗುಜರಾತ್ ಬಿಲ್ಲವ ಸಂಘ ಸೂರತ್ ಗೌರವಾಧ್ಯಕ್ಷ ಕೆ. ಎಸ್. ಅಂಚನ್, ಮಾಜಿ ಉಪಾಧ್ಯಕ್ಷ ಸಾಧು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವಾಸು ವಿ. ಸುವರ್ಣ, ಮಾಜಿ ಕೋಶಾಧಿಕಾರಿ ವಾಸು ಪೂಜಾರಿ ಬರೋಡಾ, ವಿಠಲ ಪೂಜಾರಿ ಅಂಕ್ಲೇಶ್ವರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರನ್ನು ಸತ್ಕರಿಸಲಾಯಿತು. ಅತಿಥಿ-ಗಣ್ಯರನ್ನು ಹಾಗೂ ಉಪಸ್ಥಿತರಿದ್ದ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರನ್ನು ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗೌರವಿಸಿದರು. ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಗಣ್ಯರು ಆರತಿ ನೆರವೇರಿಸಿ ಸಂಭ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಪದ್ಮಾವತಿ ಎಸ್. ಪೂಜಾರಿ ಬಳಗ ಪ್ರಾರ್ಥನೆಗೈದರು. ಗುಜರಾತ್ ಬಿಲ್ಲವ ಸಂಘ ಸೂರತ್ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಜಿ. ಪೂಜಾರಿ ಬಾಡೋಳಿ, ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಸಮಿತಿಯ ಸಾಧನೆ ವಿವರಿಸಿದರು.
ಕೋಶಾಧಿಕಾರಿ ರವೀಂದ್ರ ಸುವರ್ಣ, ರತ್ನಾಕರ್ ಕೋಟ್ಯಾನ್, ಗಣೇಶ್ ಗುಜರನ್, ಸುನೀಲ್ ಕೆ.ಅಂಚನ್ ಅತಿಥಿಗಳನ್ನು ಪುಷ್ಪಗುತ್ಛ ವನ್ನಿತ್ತು ಗೌರವಿಸಿದರು. ಗುಜರಾತ್ ಬಿಲ್ಲವ ಸಂಘ ಸೂರತ್ ಸಮಿತಿಯ ಜೊತೆ ಕಾರ್ಯದರ್ಶಿ ಮಮತಾ ಎಸ್. ಅಂಚನ್ ಪ್ರತಿಭಾ ಪುರಸ್ಕಾರದ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಪ್ರಧಾನ ಕಾರ್ಯದರ್ಶಿ ಸೌಮ್ಯಾ ಪಿ. ಪೂಜಾರಿ ವಾರ್ಷಿಕ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆರ್. ಕೆ. ಕೋಟ್ಯಾನ್, ಗಣೇಶ್ ಗುಜರನ್, ಅಜಿತ್ ಪೂಜಾರಿ, ಸುಕುಮಾರ್ ಅಮೀನ್ ಅವರು ವಿವಿಧ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿ ಪ್ರಸಾದ ವಿತರಿಸಿದರು. ಮನೋರಂಜನೆ ಪ್ರಯುಕ್ತ ತೆಲಿಕೆದ ಕಡಲ್ ಕುಡ್ಲ ತಂಡದಿಂದ “ತೆಲಿಕೆದ ಸೆರೆ’ ಕುಸಲ್ದ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಬಿಲ್ಲವ ಸಮಾಜದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ಅದ್ದರಿಂದ ತಮ್ಮ ಮಕ್ಕಳಲ್ಲಿ ಒಳಿತಿನ ಬಗ್ಗೆ ಪೋಷಕರು ಅರಿವು ಮೂಡಿಸುವ ಅಗತ್ಯವಿದೆ. ನಾವು ಗುರುಕುಲ ಪರಂಪರೆಯನ್ನು ಮೈಗೂಡಿಸಿ ಮುನ್ನಡೆದಾಗ ಬದುಕನ್ನು ಸುಲಭವಾಗಿಸಬಹುದು. ಶಿಕ್ಷಣಕ್ಕೆ ಮಹತ್ತರವಾದ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯ ಇದೆ.
– ದಯಾನಂದ ಬೋಂಟ್ರಾ,ಗೌರವಾಧ್ಯಕ್ಷ, ಗುಜರಾತ್ ಬಿಲ್ಲವ ಸಂಘ
ಚಿತ್ರ – ವರದಿ : ರೋನ್ಸ್ ಬಂಟ್ವಾಳ್