Advertisement

Digital arrest; ದಂಧೆ ನಡೆಸುತ್ತಿದ್ದ ತೈವಾನ್ ನ ನಾಲ್ವರು ಸೇರಿ 17 ಮಂದಿ ಬಂಧನ

06:49 PM Oct 14, 2024 | Team Udayavani |

ಅಹಮದಾಬಾದ್ : ರಾಷ್ಟ್ರವ್ಯಾಪಿ “ಡಿಜಿಟಲ್ ಬಂಧನ” ದಂಧೆ ನಡೆಸುತ್ತಿದ್ದ ತೈವಾನ್ ಮೂಲದ ನಾಲ್ವರು ಸೇರಿದಂತೆ 17 ಮಂದಿ ಆರೋಪಿಗಳನ್ನು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ ಎಂದು ಗುಜರಾತ್ ಅಪರಾಧ ವಿಭಾಗದ ಜಂಟಿ ಆಯುಕ್ತ ಶರದ್ ಸಿಂಘಾಲ್ ಸೋಮವಾರ ತಿಳಿಸಿದ್ದಾರೆ.

Advertisement

ಬಂಧಿತ ತೈವಾನ್ ಪ್ರಜೆಗಳನ್ನು ಮು ಚಿ ಸಂಗ್ (42), ಚಾಂಗ್ ಹು ಯುನ್ (33), ವಾಂಗ್ ಚುನ್ ವೀ (26) ಮತ್ತು ಶೆನ್ ವೀ (35) ಎಂದು ಗುರುತಿಸಲಾಗಿದ್ದು, ಉಳಿದ 13 ಮಂದಿ ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ಮತ್ತು ರಾಜಸ್ಥಾನದವರಾಗಿದ್ದಾರೆ.

ತೈವಾನ್‌ನ ನಾಲ್ವರು ಆರೋಪಿಗಳು ಕಳೆದ ಒಂದು ವರ್ಷದಿಂದ ಭಾರತಕ್ಕೆ ನಿರಂತರ ಭೇಟಿ ನೀಡುತ್ತಿದ್ದರು ಮತ್ತು ಗ್ಯಾಂಗ್‌ನ ಸದಸ್ಯರಿಗೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಲು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳು ಮತ್ತು ಇತರ ತಾಂತ್ರಿಕ ಬೆಂಬಲವನ್ನು ನೀಡಿದ್ದರು.

ಮೋಸ ಹೋದ ಹಿರಿಯ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ದೂರನ್ನು ಸ್ವೀಕರಿಸಿದ ನಂತರ, ಪೊಲೀಸರ ತಂಡಗಳು ಗುಜರಾತ್, ದೆಹಲಿ, ರಾಜಸ್ಥಾನ, ಕರ್ನಾಟಕ, ಒಡಿಶಾ ಮತ್ತು ಮಹಾರಾಷ್ಟ್ರದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿವೆ. ರಾಷ್ಟ್ರವ್ಯಾಪಿ ದಂಧೆ ನಡೆಸುತ್ತಿದ್ದ ನಾಲ್ವರು ತೈವಾನ್ ಪ್ರಜೆಗಳು ಸೇರಿದಂತೆ 17 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ವಂಚಕರು ಇಲ್ಲಿಯವರೆಗೆ ಸುಮಾರು 1,000 ಜನರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಸಿಂಘಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಸದ್ಯ ವ್ಯಾಪಕವಾಗಿ ನಡೆಯುತ್ತಿರುವ ಒಂದು ರೀತಿಯ ಸೈಬರ್ ಅಪರಾಧವಾಗಿದ್ದು, ಇದರಲ್ಲಿ ಜನರನ್ನು ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಇತ್ಯಾದಿಗಳಿಗಾಗಿ ಟ್ರಾಯ್, ಸಿಬಿಐ ಮತ್ತು ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ನಂಬುವಂತೆ ಮಾಡಲಾಗುತ್ತದೆ. ವಿಡಿಯೋ ಕರೆ ಮೂಲಕ, ಆನ್‌ಲೈನ್ ಪರಿಕರಗಳ ಮೂಲಕ ಸಂಪರ್ಕ ಸಾಧಿಸಿ ವಂಚನೆ ಎಸಗಲಾಗುತ್ತದೆ. ಹೆದರಿದವರನ್ನು ತನಿಖೆಯಿಂದ ಬಿಟ್ಟುಬಿಡಬೇಕಾದರೆ ದೊಡ್ಡ ಮೊತ್ತದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಒತ್ತಾಯಿಸಲಾಗುತ್ತದೆ. ಈ ರೀತಿಯ ವಂಚನೆಗೆ ‘ಡಿಜಿಟಲ್ ಅರೆಸ್ಟ್’ ಎಂಬ ಪದವನ್ನು ಬಳಕೆ ಮಾಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next