ಅಹಮದಾಬಾದ್: ಗುರುವಾರ ಮಧ್ಯಾಹ್ನದ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸುತ್ತದೆ ಎಂದು ಹೇಳಲಾಗಿದ್ದ “ವಾಯು’ ಚಂಡಮಾರುತವು ಬುಧವಾರ ರಾತೋರಾತ್ರಿ ಪಥ ಬದಲಿಸಿದ್ದು, ಗುಜ ರಾತ್‌ನ ಜನತೆ ನಿರಾಳರಾಗುವಂತೆ ಮಾಡಿದೆ.
ಚಂಡಮಾರುತವು ಗುಜರಾತ್ ಕರಾವಳಿಗೆ ಅಪ್ಪಳಿಸದೇ, ಸೌರಾಷ್ಟ್ರ ಕರಾವಳಿ ಯುದ್ದಕ್ಕೂ ಸಮಾನಾಂತರವಾಗಿ ಸಾಗಲಿದೆ. ಅದು ಸ್ವಲ್ಪಮಟ್ಟಿಗೆ ಪಶ್ಚಿಮದ ಕಡೆ ಮುಖ ಮಾಡಿದ ಕಾರಣ, ನೇರವಾಗಿ ಗುಜರಾತ್ ಕರಾವಳಿಗೆ ಅಪ್ಪಳಿಸಲಿಲ್ಲ. ಆದರೆ, ಕರಾವಳಿಯ ಸಮೀಪದಲ್ಲೇ ಇದು ಹಾದು ಹೋಗುವ ಕಾರಣ ಗುಜರಾತ್‌ನ ಮೇಲೆ ಪರಿಣಾಮ ತಪ್ಪಿದ್ದಲ್ಲ. “ವಾಯು’ ಎಫೆಕ್ಟ್ ಎಂಬಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾ ಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೈಅಲರ್ಟ್ ಮುಂದುವರಿಕೆ: ಚಂಡಮಾರುತವು ಗುಜರಾತ್‌ಗೆ ಅಪ್ಪಳಿಸದಿದ್ದರೂ, ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಭಾಗಶಃ ಚಂಡಮಾರುತವು ಕರಾವಳಿಗೆ ತಾಗಿಕೊಂಡೇ ಸಾಗುವ ಕಾರಣ, ಹಾನಿಯ ಪ್ರಮಾಣ ತಗ್ಗದು. ಗಿರ್-ಸೋಮನಾಥ, ಜುನಾಗಡ, ಪೋರಬಂದರ್, ದೇವ ಭೂಮಿ- ದ್ವಾರಕಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಡಿಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ. ಅಲ್ಲದೆ, ಈ ಭಾಗಗಳಲ್ಲಿ ಗಂಟೆಗೆ 155- 165 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ, ಶುಕ್ರವಾರದವರೆಗೂ ಹೈ ಅಲರ್ಟ್ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಗುಜರಾತ್‌ನ 560 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಮುದ್ರಕ್ಕಿಳಿಯಲು ಮುಂದಾಗಿದ್ದ 8 ಸಾವಿರ ಮೀನುಗಾರರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ರಾಜ್ಯ ಸರ್ಕಾರಿವು ಚಂಡಮಾರುತದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.
86 ರೈಲುಗಳ ಸಂಚಾರ ರದ್ದು
ವಾಯು ಚಂಡಮಾರುತದ ಹಿನ್ನೆಲೆ ಯಲ್ಲಿ ಪಶ್ಚಿಮ ರೈಲ್ವೇ ವಲಯವು ಗುರುವಾರ ಒಟ್ಟು 86 ರೈಲುಗಳ ಸಂಚಾರ ರದ್ದುಗೊಳಿಸಿತ್ತು. ವಾಯು ಪಥ ಬದಲಿಸಿದ್ದರೂ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾ ಯಿತು ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.