ಬೊಟಾಡ್: ಗುಜರಾತ್‌ನ ಬೊಟಾಡ್ ಜಿಲ್ಲೆಯ ರೋಜಿದ್ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, ಹತ್ತು ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ನಕಲಿ ದೇಶಿ ನಿರ್ಮಿತ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೊಟಾಡ್ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಶಿಶ್ ಭಾಟಿಯಾ ತಿಳಿಸಿದ್ದಾರೆ.
“ನಕಲಿ ಮದ್ಯ ಸೇವಿಸಿ ಇದುವರೆಗೆ ಏಳು ಮಂದಿ ಸಾವನ್ನಪ್ಪಿದ್ದು, ಸುಮಾರು 10 ಮಂದಿಯನ್ನು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಮೂವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ” ಎಂದು ಭಾಟಿಯಾ ಹೇಳಿದ್ದಾರೆ.
ಇದಕ್ಕೂ ಮೊದಲು, ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತನ ಪತ್ನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾನುವಾರ ರಾತ್ರಿ ರೋಜಿದ್ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿದ ಕೆಲವೇ ಗಂಟೆಗಳ ನಂತರ ತನ್ನ ಗಂಡನ ದೇಹ ಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದಿದ್ದಾರೆ.
ಚೇತರಿಸಿಕೊಳ್ಳುತ್ತಿರುವ ಹಿಮ್ಮತ್‌ಭಾಯ್, ಭಾನುವಾರ ರಾತ್ರಿ ಕಾಳಧನಿಕನಿಂದ ಖರೀದಿಸಿದ ನಕಲಿ ಮದ್ಯವನ್ನು ಸೇವಿಸಿದ ನಂತರ ಕನಿಷ್ಠ 15 ಜನರು ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ.