ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಜಂಟಿ ತಂಡವು ಪಶ್ಚಿಮ ಬಂಗಾಳದ ಕೋಲ್ಕತಾ ಬಂದರಿನ ಬಳಿ ಕಂಟೇನರ್‌ನಿಂದ 197.82 ಕೋಟಿ ರೂಪಾಯಿ ಮೌಲ್ಯದ 39.5 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ದುಬೈನ ಜೆಬೆಲ್ ಅಲಿ ಬಂದರಿನಿಂದ ಶಿಪ್ಪಿಂಗ್ ಕಂಟೈನರ್‌ನಲ್ಲಿ ಕಳುಹಿಸಲಾದ 7,220 ಕಿಲೋಗ್ರಾಂಗಳಷ್ಟು ಲೋಹದ ಗುಜರಿಯ ಭಾಗವಾಗಿರುವ 12 ಗೇರ್‌ಬಾಕ್ಸ್‌ಗಳಲ್ಲಿ ನಿಷಿದ್ಧ ವಸ್ತುವನ್ನು ಮರೆಮಾಡಲಾಗಿದೆ ಮತ್ತು ಫೆಬ್ರವರಿಯಲ್ಲಿ ಅದು ಕೋಲ್ಕತಾ ಬಂದರನ್ನು ತಲುಪಿದೆ ಎಂದು ಗಾಂಧಿನಗರದಲ್ಲಿ ಗುಜರಾತ್ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಹೇಳಿದ್ದಾರೆ.
“ಗುಜರಾತ್ ಎಟಿಎಸ್‌ಗೆ ದೊರೆತ ನಿರ್ದಿಷ್ಟ ಸುಳಿವು ಆಧರಿಸಿ, ಎಟಿಎಸ್ ಮತ್ತು ಡಿಆರ್‌ಐ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಕೆಲವು ದಿನಗಳ ಹಿಂದೆ ಕೋಲ್ಕತಾ ಬಂದರಿನ ಬಳಿಯ ಕಂಟೈನರ್ ಸರಕು ಸಾಗಣೆ ನಿಲ್ದಾಣದ ಮೇಲೆ ದಾಳಿ ನಡೆಸಿತು ಮತ್ತು ಫೆಬ್ರವರಿಯಲ್ಲಿ ದುಬೈನಿಂದ ಅಲ್ಲಿಗೆ ಬಂದ ಕಂಟೇನರ್‌ನಲ್ಲಿ ಪತ್ತೆಹಚ್ಚಿತು ಎಂದು ಭಾಟಿಯಾ ಸುದ್ದಿಗಾರರಿಗೆ ತಿಳಿಸಿದರು.
ಲೋಹದ ಗುಜರಿಯಲ್ಲಿ ಪತ್ತೆಯಾದ 36 ಗೇರ್‌ಬಾಕ್ಸ್‌ಗಳಲ್ಲಿ 12 ಬಿಳಿ ಶಾಯಿಯ ಗುರುತುಗಳನ್ನು ಹೊಂದಿದ್ದು, ಈ ಗೇರ್‌ಬಾಕ್ಸ್‌ಗಳನ್ನು ತೆರೆದಾಗ 72 ಬಿಳಿ ಪುಡಿಯ ಪ್ಯಾಕೆಟ್‌ಗಳು ಕಂಡುಬಂದಿವೆ ಎಂದು ಅವರು ಹೇಳಿದರು. ”ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 197.82 ಕೋಟಿ ರೂ ಮೌಲ್ಯದ 39.5 ಕೆಜಿ ಹೆರಾಯಿನ್ ಪ್ಯಾಕೆಟ್‌ಗಳನ್ನು ಒಳಗೊಂಡಿರುವುದನ್ನು ವಿಧಿವಿಜ್ಞಾನ ವಿಶ್ಲೇಷಣೆ ದೃಢಪಡಿಸಿದೆ. ಉಳಿದ ಗೇರ್ ಬಾಕ್ಸ್ ಗಳನ್ನೂ ತೆರೆಯಲು ಅಧಿಕಾರಿಗಳು ನಿರ್ಧರಿಸಿರುವುದರಿಂದ ತನಿಖೆ ಇನ್ನೂ ಮುಂದುವರಿದಿದೆ. ಕಂಟೇನರ್ ಅನ್ನು ಕೋಲ್ಕತಾ ದಿಂದ ಬೇರೆ ದೇಶಕ್ಕೆ ಮರು-ರಫ್ತು ಮಾಡಲು ಉದ್ದೇಶಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಈ ವರ್ಷದ ಜುಲೈನಲ್ಲಿ ಗುಜರಾತ್ ಎಟಿಎಸ್ ಕಚ್ ಜಿಲ್ಲೆಯ ಮುಂದ್ರಾ ಬಂದರಿನ ಬಳಿ ಕಂಟೈನರ್‌ನಿಂದ ಫ್ಯಾಬ್ರಿಕ್ ರೋಲ್‌ಗಳ ಒಳಗೆ ಮರೆಮಾಡಲಾಗಿದ್ದ ಸುಮಾರು 376.5 ಕೋಟಿ ರೂ. ಮೌಲ್ಯದ 75.3 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು.
ಈ ವರ್ಷ ಮೇ ತಿಂಗಳಲ್ಲಿ ಮುಂದ್ರಾ ಬಂದರಿನ ಬಳಿ ಕಂಟೈನರ್‌ನಿಂದ 500 ಕೋಟಿ ಮೌಲ್ಯದ 56 ಕೆಜಿ ಕೊಕೇನ್ ಅನ್ನು ಡಿಆರ್‌ಐ ವಶಪಡಿಸಿಕೊಂಡಿತ್ತು.ಏಪ್ರಿಲ್‌ನಲ್ಲಿ ಡಿಆರ್‌ಐ ಕಚ್‌ನ ಕಾಂಡ್ಲಾ ಬಂದರಿನ ಬಳಿ ಕಂಟೈನರ್‌ನಿಂದ 1,439 ಕೋಟಿ ರೂಪಾಯಿ ಮೌಲ್ಯದ 205.6 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು. ಅದೇ ಸಮಯದಲ್ಲಿ, ಗುಜರಾತ್ ಎಟಿಎಸ್ ಮತ್ತು ಡಿಆರ್‌ಐ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನಿಂದ ಅಮ್ರೇಲಿ ಜಿಲ್ಲೆಯ ಪಿಪಾವಾವ್ ಬಂದರಿಗೆ ಆಗಮಿಸಿದ ಹಡಗು ಕಂಟೈನರ್‌ನಿಂದ 450 ಕೋಟಿ ರೂ. ಮೌಲ್ಯದ 90 ಕಿಲೋ ಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಡಿಆರ್‌ಐ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಂದ್ರಾ ಬಂದರಿನಲ್ಲಿ ಎರಡು ಕಂಟೈನರ್‌ಗಳಿಂದ ಅಫ್ಘಾನಿಸ್ತಾನದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾದ ಜಾಗತಿಕ ಮಾರುಕಟ್ಟೆಯಲ್ಲಿ 21,000 ಕೋಟಿ ರೂಪಾಯಿ ಮೌಲ್ಯದ ಸುಮಾರು 3,000 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು.