ಆರನೇ ವಯಸ್ಸಿನಲ್ಲಿದ್ದಾಗ ರಷ್ಯಾದ ಎರಡು ಕೆಟಲ್ ಬೆಲ್ ತೂಕವನ್ನು ಎತ್ತುವುದರ ಮೂಲಕ ವೀಕ್ಷಕರನ್ನು ನಿಬ್ಬೆರಗಾಗಿಸಿದಳು. ಎಂಟನೆಯ ವಯಸ್ಸಿನಲ್ಲಿ ಸಲೀಸಾಗಿ ನೂರು ಕೆ.ಜಿ. ಭಾರವನ್ನೆತ್ತಿ ಗಿನ್ನೆಸ್ ದಾಖಲೆಗೆ ಸೇರಿಕೊಂಡಳು. ಆಗ ಅವಳ ದೇಹದ ಭಾರ 40 ಕಿಲೋ ಇತ್ತು. ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ದೇಹ ತೂಕ ಎಂಭತ್ತು ಕಿಲೋ ಇದ್ದರೂ ಇದರ ನಾಲ್ಕು ಪಟ್ಟು ಭಾರವಾಗಿರುವ ಮೂರೂವರೆ ಕ್ವಿಂಟಾಲು ತೂಕದ ಪದಾರ್ಥವನ್ನು ಎತ್ತುವುದರ ಮೂಲಕ ಗಿನ್ನೆಸ್ ದಾಖಲೆಯಲ್ಲಿ ಇನ್ನೊಮ್ಮೆ ಸೇರಿ ವಿಶ್ವದ ಅತ್ಯಂತ ಬಲಶಾಲಿ ಹುಡುಗಿ ಎಂಬ ಕೀರ್ತಿಯನ್ನು ಗಳಿಸಿದಳು.
ವಿಶ್ವದ ಅತ್ಯಂತ ಬಲಶಾಲಿಯಾದ ಹುಡುಗಿ ಯಾರು ಅಂತ ಕೇಳಿದರೆ ಗಿನ್ನೆಸ್ ದಾಖಲೆ ಹೇಳುವ ಹೆಸರು ವಾರ್ಯಾ ಅಕುಲೋವಾ. ಉಕ್ರೇನ್‌ನ ಕ್ರಿವೋಯ್ ರೋಗ್ ಪಟ್ಟಣದಲ್ಲಿ 1992ರ ಜನವರಿಯಲ್ಲಿ ಜನಿಸಿದ ಅವಳ ತಂದೆ ಯಾರ್ಲಿ ಅಕುಲೋವಾ, ತಾಯಿ ಲಾರಿಸಾ ಇಬ್ಬರೂ ಸರ್ಕಸ್ ಕಂಪೆನಿಯ ಕಲಾವಿದರು. ಸಾಹಸ ಇವರ ಜೀನ್ಸ್‌ನಲ್ಲಿಯೇ ಬೆರೆತು ಬಂದಿತ್ತು. ವಾರ್ಯಾಳ ಮುತ್ತಾತ ಬೆನ್ನಿನ ಮೇಲೆ 1,200 ಕಿ.ಲೋ ಭಾರದ ಗಂಟು ಹೊತ್ತುಕೊಂಡು ಸಲೀಸಾಗಿ ಹೋಗುತ್ತಿದ್ದರಂತೆ. ಶೌರ್ಯ, ಪರಾಕ್ರಮಗಳು ಅವರ ವಂಶಕ್ಕೆ ದೇವರಿತ್ತ ಬಳುವಳಿ. ರಾಣಿ ಎರಡನೆಯ ಕ್ಯಾಥರಿನ್‌ಳ ಕಾಲದಲ್ಲಿ ಸಾಹಸದಲ್ಲಿ ಪ್ರಸಿದ್ಧರಾಗಿದ್ದ ಹಿರಿಯರು ಟರ್ಕಿಷ್-ರಷ್ಯಾ ಯುದ್ಧದಲ್ಲಿಯೂ ತೋಳ್ಬಲ ಪ್ರದರ್ಶಿಸಿದ್ದರು. ಲಾರಿಸಾ ವಾರ್ಯಾಳ ಗರ್ಭಿಣಿಯಾಗಿರುವಾಗ ತನ್ನ ಹಾಗೆಯೇ ಸರ್ಕಸ್ಸಿನಲ್ಲಿ ಚಮತ್ಕಾರ ತೋರಿಸಬಲ್ಲ ಗಂಡುಮಗುವೇ ಜನಿಸುತ್ತದೆಂಬ ಕನಸು ಕಂಡಿದ್ದಳು. ಆದರೆ, ಹೆಣ್ಣುಮಗು ಜನಿಸಿರುವುದು ಕಂಡು ಕನಸು ನುಚ್ಚುನೂರಾಯಿತೆಂದು ದುಃಖೀಸಿದ್ದರಂತೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು.
ಆದರೆ, ಚಿಕ್ಕವಳಿರುವಾಗಲೇ ವಾರ‍್ಯಾ ಹೆಣ್ಣಾದರೂ ತಾಯಿಯ ಕನಸುಗಳನ್ನು ನನಸು ಮಾಡಬಲ್ಲೆನೆಂಬ ವಿಶ್ವಾಸ ಮೂಡಿಸಿದಳು. ಒಂದು ತಿಂಗಳ ಮಗುವಿನಲ್ಲೇ ಅಸಾಧಾರಣ ಶಕ್ತಿಯಿರುವುದು ತಾಯಿಗೆ ಅರಿವಾಯಿತು. ಒಂದು ವರ್ಷದಲ್ಲೇ ಒಂದು ಕೈಯನ್ನು ನೆಲಕ್ಕೂರಿ ಗಿರಿಗಿರಿ ತಿರುಗುವ ಸಾಮರ್ಥ್ಯ ಹುಡುಗಿಯಲ್ಲಿತ್ತು. ಭುಜಗಳ ಮೇಲೆ ಭಾರವನ್ನೂ ಎತ್ತುತ್ತಿದ್ದಳಂತೆ. ಮೂರನೆಯ ವಯಸ್ಸಿನಲ್ಲಿ ಹೆತ್ತವರ ಜೊತೆಗೆ ಸರ್ಕಸ್ಸಿನಲ್ಲಿ ಹಲವು ಆಟಗಳನ್ನು ಪ್ರದರ್ಶಿಸತೊಡಗಿದಳು. ನಾಲ್ಕನೆಯ ವಯಸ್ಸಿನಲ್ಲಿ ಪವರ್ ಲಿಫ್ಟಿಂಗ್ ವ್ಯಾಯಾಮದಲ್ಲಿ ಪಳಗಿದಳು. ಅದರಲ್ಲಿ ಹಲವು ಸಲ ಸ್ಪರ್ಧೆಗಳಲ್ಲಿ ಅತ್ಯಧಿಕ ಭಾರವನ್ನೆತ್ತುವ ಶೌರ್ಯ ಪ್ರದರ್ಶಿಸಿ ಮೊದಲ ಸ್ಥಾನ ಪಡೆದಳು.
ವಾರ‍್ಯಾಳಿಗೆ ಆರನೇ ವಯಸ್ಸಿನಲ್ಲಿದ್ದಾಗ ರಷ್ಯಾದ ಎರಡು ಕೆಟಲ್ ಬೆಲ್ ತೂಕವನ್ನು ಎತ್ತುವುದರ ಮೂಲಕ ವೀಕ್ಷಕರನ್ನು ನಿಬ್ಬೆರಗಾಗಿಸಿದಳು. ಎಂಟನೆಯ ವಯಸ್ಸಿನಲ್ಲಿ ಸಲೀಸಾಗಿ ನೂರು ಕೆ.ಜಿ. ಭಾರವನ್ನೆತ್ತಿ ಗಿನ್ನೆಸ್ ದಾಖಲೆಗೆ ಸೇರಿಕೊಂಡಳು. ಆಗ ಅವಳ ದೇಹದ ಭಾರ 40 ಕಿಲೋ ಇತ್ತು. ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ದೇಹ ತೂಕ ಎಂಭತ್ತು ಕಿಲೋ ಇದ್ದರೂ ಇದರ ನಾಲ್ಕು ಪಟ್ಟು ಭಾರವಾಗಿರುವ ಮೂರೂವರೆ ಕ್ವಿಂಟಾಲು ತೂಕದ ಪದಾರ್ಥವನ್ನು ಎತ್ತುವುದರ ಮೂಲಕ ಗಿನ್ನೆಸ್ ದಾಖಲೆಯಲ್ಲಿ ಇನ್ನೊಮ್ಮೆ ಸೇರಿ ವಿಶ್ವದ ಅತ್ಯಂತ ಬಲಶಾಲಿ ಹುಡುಗಿ ಎಂಬ ಕೀರ್ತಿಯನ್ನು ಗಳಿಸಿದಳು. ಒಂಭತ್ತನೆಯ ವಯಸ್ಸಿನಲ್ಲಿ ನಾಲ್ಕು ಮಕ್ಕಳನ್ನು ಹೆಗಲ ಮೇಲೆ ಹೊತ್ತು ನಡೆಯುವ ಸಾಮರ್ಥ್ಯವಿದ್ದ ವಾರ್ಯಾ ಮುಂದೆ ಮೂವರು ಬಲಶಾಲಿಗಳನ್ನು ಹೀಗೆಯೇ ಹೊರಬಲ್ಲೆನೆಂದು ತೋರಿಸಿದಳು. ಮೊದಲು ತಂದೆಯನ್ನು ಎತ್ತಿಕೊಂಡು ನಡೆಯುವ ಶಕ್ತಿ ಪ್ರದರ್ಶಿಸಿದಳು. ಹನ್ನೆರಡನೆಯ ವಯಸ್ಸಿನಲ್ಲಿ ತಂದೆ, ತಾಯಿ ಇಬ್ಬರನ್ನಲ್ಲದೆ ಮೂರು ಕೆಟಲ್ ಬೆಲ್‌ಗಳನ್ನೂ ಹೊತ್ತುಕೊಂಡು ನಡೆದಾಡುವುದು ಅವಳಿಗೆ ಬಹು ಸುಲಭವೆನಿಸುತ್ತಿತ್ತು.
ಹುಡುಗಿಯೊಬ್ಬಳು ಭಾರವೆತ್ತುವುದು ಸರ್ವಥಾ ಸರಿಯಲ್ಲ ಎಂಬ ಟೀಕೆಯನ್ನು ನಗುತ್ತಲೇ ಸ್ವೀಕರಿಸಿರುವ ವಾರ‍್ಯಾ ಅದಕ್ಕೆ ಉತ್ತರ ಕೊಟ್ಟಿಲ್ಲ. ಈಗ ಕೀವ್ ನಗರದಲ್ಲಿ ಅವಳ ವಾಸ. ತೀರ ಸರಳವಾದ ಆಹಾರ. ಚಹಾ, ಬ್ರೆಡ್, ಒಂದು ಮೊಟ್ಟೆ, ದಿನಕ್ಕೆ ಒಂದು ಸಲ ಹಾಲು, ಹಣ್ಣಿನ ರಸ, ನೂಡಲ್ಸ್, ಅಪರೂಪಕ್ಕೊಮ್ಮೆ ಮಾಂಸಾಹಾರ ಇದಿಷ್ಟೇ ಅವಳಿಗೆ ಸಾಕಾಗುತ್ತದೆ.
ಸ್ಟಿರಾಯ್ಡ ಸೇವನೆ ಇಲ್ಲ. ಬಾಕ್ಸಿಂಗ್, ಕಿಕ್ ಬಾಕ್ಸಿಂಗ್ ಅವಳಿಗೆ ಗೊತ್ತಿದೆ. ಮುಂದೆ ಒಲಿಂಪಿಕ್‌ನಲ್ಲಿ ಬಂಗಾರದ ಪದಕ ಗಳಿಸಬೇಕೆಂಬ ಮನದಿಚ್ಛೆ ಈ ಇಪ್ಪತ್ನಾಲ್ಕರ ಹರಯದ ಕೋಮಲೆಯದು.
ಪರಾಶರ