ಮೈಸೂರು: ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎರಡು ಗಿನ್ನಿಸ್ ದಾಖಲೆಗೆ ಸಿದ್ಧತೆ ನಡೆಸಿದ್ದ ಮೈಸೂರು ಜಿಲ್ಲಾಡಳಿತ ಅತಿ ಉದ್ದದ ಯೋಗಾಸನ ಸರಪಳಿ ವಿಭಾಗದಲ್ಲಿ ದಾಖಲೆ ಬರೆಯಲು ನಡೆಸಿದ ಪ್ರಯತ್ನಕ್ಕೆ ಮೈಸೂರು ಅರಮನೆ ಸಾಕ್ಷಿಯಾಯಿತು.
ಸೋಮವಾರ ಅರಮನೆ ಆವರಣದಲ್ಲಿ ನಡೆದ ಅತಿ ಉದ್ದದ ಯೋಗಾಸನ ಸರಪಳಿ ಕಾರ್ಯಕ್ರಮದಲ್ಲಿ ನಗರದ 44 ಶಿಕ್ಷಣ ಸಂಸ್ಥೆಗಳು, ವಿವಿಧ ಯೋಗ ಶಾಲೆಗಳು, ಸಾರ್ವಜನಿಕರು ಸೇರಿ ಒಟ್ಟಾರೆ 8381 ಮಂದಿ ಭಾಗವಹಿಸಿ ಯೋಗಾಸನ ಪ್ರದರ್ಶಿಸಿದರು. ತಮಿಳುನಾಡಿನ ಪೆರಂಬಲೂರುನಲ್ಲಿ 3500 ಜನರು ಭಾಗವಹಿಸಿದ್ದ ಅತಿ ಉದ್ದದ ಯೋಗಾಸನ ಸರಪಳಿ ಗಿನ್ನಿಸ್ ದಾಖಲೆ ಬರೆದಿದೆ. ಮೈಸೂರು ಜಿಲ್ಲಾಡಳಿತ ತಮಿಳುನಾಡಿನ ದಾಖಲೆಯನ್ನು ಮೀರಿ
ಹೊಸ ದಾಖಲೆ ಬರೆಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಿ, ಈಗಾಗಲೇ ಎರಡು ಬಾರಿ ಪೂರ್ವ ತಾಲೀಮು ನಡೆಸಿತ್ತು. ತಲಾ ಹತ್ತು ಸೆಕೆಂಡ್‌ಗಳ ಅವಧಿಯಂತೆ ಎರಡೂವರೆ ನಿಮಿಷಗಳ ಕಾಲಾವಧಿಯಲ್ಲಿ ನಾಲ್ಕು ಆಸನಗಳನ್ನು
ಪ್ರದರ್ಶಿಸಲಾಯಿತು. ವೀರಭದ್ರಾಸನ-1, ತ್ರಿಕೋನಾಸನ, ವೀರಭದ್ರಾಸನ-2 ಹಾಗೂ ಪ್ರಾಸರಿತ ಪಾದೋತ್ಥಾನಾಸನಗಳನ್ನು ಪ್ರದರ್ಶಿಸಲಾಯಿತು. ವಿಶ್ವ ಗಿನ್ನಿಸ್ ದಾಖಲೆ ಸಂಸ್ಥೆಯಿಂದ ಬಂದಿದ್ದ ಇಬ್ಬರು ಟೈಂ ಕೀಪರ್‌ಗಳು ಎಲ್ಲವನ್ನೂ ದಾಖಲಿಸಿಕೊಂಡರು.