ಬೆಂಗಳೂರು: ಶಕ್ತಿಕೇಂದ್ರ ವಿಧಾನಸೌಧ ಆವರಣದಲ್ಲಿ ರಜಾ ದಿನವಾದ ಭಾನುವಾರ ಯೋಗಪಟುಗಳ ಪ್ರವಾಹವೇ ಹರಿದು ಬಂದಿತ್ತು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಏಕ ಕಾಲದಲ್ಲಿ 25 ಸೆಕೆಂಡ್‌ಗಳ ಕಾಲ ಶೀರ್ಷಾಸನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದರು. ಮೂರನೇ ವರ್ಷದ ಅಂತಾರಾಷ್ಟ್ರೀಯ ಯೋಗದಿನಕ್ಕೆ ಪೂರ್ವಭಾವಿಯಾಗಿ ನಡೆದ ಈ ತಾಲೀಮು ಎಲ್ಲರನ್ನು ನಿಬ್ಬೆರಗುಗೊಳಿಸಿತಲ್ಲದೆ ಯೋಗದ ಮಹತ್ವ ಸಾರಿತು.
ವಿಧಾನಸೌಧದ ಪೂರ್ವದ್ವಾರದ(ಹೈಕೋರ್ಟ್ ಎದುರು) 2087 ಮಂದಿ ಏಕಕಾಲಕ್ಕೆ ಶೀರ್ಷಾಸನ ಹಾಕಿ, ಸುಮಾರು 25 ಸೆಕೆಂಡ್ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲುವ ಮೂಲಕ ಈ ಹಿಂದೆ ಚೆನ್ನೈನಲ್ಲಿ ನಿರ್ಮಿಸಿದ್ದ ಗಿನ್ನಿಸ್ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, “ಯೋಗದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಇದಕ್ಕೆ ಯಾವುದೇ ಬಂಡವಾಳ ಬೇಕಾಗಿಲ್ಲ. ಶೀರ್ಷಾಸನದಿಂದ ಮೆದುಳಿನ ರಕ್ತ ಚಲನೆ ಸರಾಗವಾಗಿ ಕೆಟ್ಟ ಆಲೋಚನೆ ದೂರಾಗುತ್ತದೆ,’ ಎಂದು ಆಭಿಪ್ರಾಯಪಟ್ಟರು. ಶೀರ್ಷಾಸನದ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಕ್ಕೆ ಶುಭ ಕೋರಿದರು.
“ಯೋಗದ ಬಗ್ಗೆ ಕೀಳರಿಮೆ ಹೊಂದುವುದು ಸರಿಯಲ್ಲ. ನಮ್ಮೊಳಗೆ ಇರುವ ನಿಧಿಯನ್ನು ಹುಡುಕುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಜಗತ್ತು ನಮ್ಮನ್ನು ಅನುಸರಿಸುತ್ತಿದೆ, ನಾವು ಬೇರೆಯವರತ್ತ ಮುಖ ಮಾಡಿದ್ದೇವೆ. ಸ್ವಾಮಿ ವಿವೇಕಾನಂದ, ಬಿ.ಕೆ.ಎಸ್. ಅಯ್ಯಂಗಾರ್, ಕೃಷ್ಣಮಾಚಾರ್ ಮೊದಲಾದವರು ಯೋಗವನ್ನು ಶ್ರೀಮಂತಗೊಳಿಸಿದ್ದಾರೆ. ಹೀಗಾಗಿ ನಮ್ಮೊಳಗಿನ ಸಂಪತ್ತನ್ನು ಮೊದಲು ಕಂಡುಕೊಳ್ಳಬೇಕು ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, “ಮನಸ್ಸು ಮತ್ತು ದೇಹ ಒಟ್ಟಾಗಿ ಕೆಲಸ ಮಾಡಿದಾಗ ಮನುಷ್ಯ ಆರೋಗ್ಯವಾಗಿರುತ್ತಾನೆ. ಇದಕ್ಕೆ ಯೋಗ ಬಹಳ ಅಗತ್ಯ. ಯೋಗ ವ್ಯಕ್ತಿಯನ್ನು ಶಕ್ತಿಯನ್ನಾಗಿ ಬದಲಾಯಿಸುತ್ತದೆ. ಇದರಿಂದ ದೇಶಕ್ಕೂ ಹೊಸ ಚೈತನ್ಯ ಬರುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೋಗ ಸೇರಿದಂತೆ ಭಾರತದ ಮೂಲ ಸಂಸ್ಕೃತಿಯನ್ನು ವಿಶ್ವದ್ಯಾಂತ ಪ್ರಚಾರ ಮಾಡಿ ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಸೇರಿಸುತ್ತಿದ್ದಾರೆ’ ಎಂದು ಹೇಳಿದರು.
ಅಂಗಾಂಗದಾನ ಹೇಗೆ ಮಾಡುವುದು ಎಂಬುದರ ಕುರಿತು ಮಾಹಿತಿ ನೀಡುವ ಆರೋಗ್ಯ ಇಲಾಖೆ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆನ್‌ಲೈನ್ ಮೂಲಕ ಅಂಗಾಂಗದಾನ ಮಾಡುವುದು ಹೇಗೆ ಎಂಬುದನ್ನು ವಿವರಿಸಿದರು. ಆಸಕ್ತರು ತಮ್ಮ ಆಧಾರ್ ಸಂಖ್ಯೆ ಮತ್ತು ರಕ್ತದ ಗುಂಪಿನ ಮಾಹಿತಿ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ್ ಮೂರ್ತಿ, ಸದಸ್ಯ ಟಿ.ಎ.ಶರವಣ. ಯೋಗಗುರು ಸ್ವಾಮಿ ವಚನಾನಂದ ಮೊದಲಾದವರು ಉಪಸ್ಥಿತರಿದ್ದರು.
ವಾಕಥಾನ್‌ಗೆ ಚಾಲನೆ: ವಿಧಾನಸೌಧದಲ್ಲಿ ದಾಖಲೆಯ ಶೀರ್ಷಾಸನ ಪ್ರದರ್ಶನಕ್ಕೂ ಪೂರ್ವದಲ್ಲಿ ರಾಜಭವನದಿಂದ ಯೋಗ ವಾಕಥಾನ್ ಹೊರಟಿತು. ರಾಜ್ಯಪಾಲ ವಿ.ಆರ್.ವಾಲಾ ಅವರು ಯೋಗ ಧ್ವಜ ತೋರಿಸುವ ಮೂಲಕ ವಾಕಥಾನ್‌ಗೆ ಚಾಲನೆ ನೀಡಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯೋಗ ಪಟುಗಳಿಗೆ ರಾಜ್ಯಪಾಲರು ಶುಭ ಕೋರಿದರು.
ಮೂರನೇ ವರ್ಷದ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಜೂ.21ಕ್ಕೆ ನಡೆಯಲಿದ್ದು, ಅಂದು ಬೆಳಗ್ಗೆ 6.30ರಿಂದ 8.30ರವರೆಗೆ ವಿಧಾನಸೌಧದ ಮುಂಭಾಗದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.
-ಸ್ವಾಮಿ ವಚನಾನಂದ, ಯೋಗಗುರು