Advertisement

ಗಿನ್ನಿಸ್‌ ದಾಖಲೆ ನಮ್ಮ ಕೈತಪ್ಪಿಲ್ಲ: ಡಿಸಿ ರಂದೀಪ್‌

12:46 PM Jun 30, 2017 | Team Udayavani |

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆಸಲಾದ ಬೃಹತ್‌ ಯೋಗ ಪ್ರದರ್ಶನದ ಗಿನ್ನಿಸ್‌ ದಾಖಲೆ ನಮ್ಮ ಕೈತಪ್ಪಿಲ್ಲ, ಪೂರಕ ದಾಖಲೆಗಳನ್ನು ಸಲ್ಲಿಸಲಿದ್ದು, ಗಿನ್ನಿಸ್‌ ದಾಖಲೆ ದೊರೆಯುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಗದಲ್ಲಿ ಎರಡು ಗಿನ್ನಿಸ್‌ ದಾಖಲೆಗೆ ಪ್ರಯತ್ನಿಸಲಾಗಿತ್ತು. ಎರಡೂ ಪ್ರದರ್ಶನಕ್ಕೆ ಮೈಸೂರಿಗರ ಪ್ರತಿಕ್ರಿಯೆ ಉತ್ತಮವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಜೂ.19ರಂದು ಅರಮನೆ ಆವರಣದಲ್ಲಿ ನಡೆದ ಅತಿದೊಡ್ಡ ಯೋಗ ಸರಪಳಿ ಪ್ರದರ್ಶನ ಸಂಬಂಧದ ಛಾಯಾಚಿತ್ರ, ವಿಡಿಯೋ ತುಣುಕು, ಪತ್ರಿಕಾ ಮಾಧ್ಯಮಗಳ ವರದಿ, ಡ್ರೋಣ್‌ ಕ್ಯಾಮರಾದಲ್ಲಿ ಸೆರೆಹಿಡಿಯಲಾದ ದೃಶ್ಯಾವಳಿಗಳನ್ನು ಗುರುವಾರ ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್ಸ್‌ ಸಂಸ್ಥೆಗೆ ಸಲ್ಲಿಸಲಾಗಿದೆ. ಸದ್ಯ ಟಿಕೆಟ್‌ ನೀಡಿಕೆ ಆಧಾರದ ಮೇಲೆ ಆಹ್ಮದಾಬಾದ್‌ಗೆ ಗಿನ್ನಿಸ್‌ ದಾಖಲೆ ನೀಡಲಾಗಿದೆ ಎಂದರು.

ಗಮನಕ್ಕೆ ತರಲಾಗುವುದು: ರೇಸ್‌ಕೋರ್ಸ್‌ ಆವರಣದಲ್ಲಿ 72 ಸಾವಿರ ಜನರು ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತಿಮವಾಗಿ ನಮ್ಮ ಗುರಿ ಹಿಂದಿನ ದಾಖಲೆ 37 ಸಾವಿರವನ್ನು ಮುರಿಯುವುದಾಗಿತ್ತು. ಆದರೆ, ಮೈಸೂರಿಗರು ನಿರೀಕ್ಷೆಗೆ ಮೀರಿ ಸಹಕಾರ ನೀಡಿದ್ದರಿಂದ 54101 ಜನರು ಯೋಗ ಪ್ರದರ್ಶನದಲ್ಲಿ ಭಾಗಿಯಾದರು. ರಜೆ ದಿನವಾಗಿದ್ದರೆ ಇನ್ನೂ ಹೆಚ್ಚಿನ ಜನ ಭಾಗವಹಿಸುವ ಸಾಧ್ಯತೆ ಇತ್ತು.

ಈ 54101 ಜನರಿಗೆ ಟಿಕೆಟ್‌ ನೀಡಿರುವ ಮಾಹಿತಿಯಷ್ಟೇ ಗಿನ್ನಿಸ್‌ ಸಂಸ್ಥೆಗೆ ಹೋಗಿದೆ. ಆದರೆ, ಸುಮಾರು 1 ಸಾವಿರ ಮಂದಿ ಪ್ರದರ್ಶಕರು ಮುಂಚಿತವಾಗಿಯೇ ಮೈದಾನದೊಳಗಿದ್ದರು, ಅವರಿಗೆ ಯಾವ ಟಿಕೆಟ್‌ ನೀಡಿರಲಿಲ್ಲ. ಈ ಅಂಶವನ್ನೂ ಸಂಸ್ಥೆ ಗಮನಕ್ಕೆ ತರಲಾಗುವುದು. 50 ರಿಂದ 60 ಲಕ್ಷ ರೂ. ವೆಚ್ಚದಲ್ಲಿ ಇಡೀ ಪ್ರದರ್ಶನ ಪೂರ್ಣಗೊಳಿಸಿದ್ದು, 3 ತಿಂಗಳವರೆಗೆ ಗಿನ್ನಿಸ್‌ ಸಂಸ್ಥೆಗೆ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ.

ನಮ್ಮ ಮನವಿಗೆ ಸಂಸ್ಥೆ ಒಪ್ಪಿದರೆ ವಿಶೇಷ ವೀಕ್ಷಕರನ್ನು ಕಳುಹಿಸುವ ಸಾಧ್ಯತೆ ಇದೆ ಎಂದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ರಾಜು, ಜಿಎಸ್‌ಎಸ್‌ ಸಂಸ್ಥೆಯ ಶ್ರೀಹರಿ, ಪ್ರಶಾಂತ್‌, ನಾರಾಯಣ ಗೌಡ ಇದ್ದರು.

Advertisement

ದಾಖಲಾತಿಗಳನ್ನು ಸಲ್ಲಿಸಲಾಗುವುದು
ಜೂ. 21ರಂದು ರೇಸ್‌ಕೋರ್ಸ್‌ ಆವರಣದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದ ಆಡಿಯೋ, ವಿಡಿಯೋ, ಪತ್ರಿಕಾ ಮಾಧ್ಯಮಗಳ ವರದಿಗಳು, ಡ್ರೋಣ್‌ ಕ್ಯಾಮರಾಗಳ ಛಾಯಾಚಿತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಜುಲೈ ಮೊದಲ ವಾರದಲ್ಲಿ ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್ಸ್‌ ಸಂಸ್ಥೆಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next