Advertisement

Guidlines: ಗ್ರಾಮಸಭೆಗೆ ಮಾರ್ಗಸೂಚಿ ಉತ್ತರದಾಯಿತ್ವ ಅಗತ್ಯ

04:12 AM Oct 09, 2024 | Team Udayavani |

ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ವರ್ಷಕ್ಕೆ 2 ಬಾರಿ ಕಡ್ಡಾಯವಾಗಿ ಗ್ರಾಮಸಭೆ ನಡೆಸುವುದು, ಗ್ರಾಮಸಭೆ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್‌ ವತಿ­ಯಿಂದ ನಡೆಸಲಾಗುವ ವಿವಿಧ ಸಭೆಗಳಿಗಾಗಿ ವರ್ಷದ ನಿರ್ದಿಷ್ಟ ದಿನಗಳ ನಿಗದಿ, ಈ ಸಭೆಗಳಲ್ಲಿ ಚರ್ಚಿಸಿ, ಕೈಗೊಳ್ಳಬಹುದಾದ ನಿರ್ಣಯಗಳ ಕುರಿತಂತೆ ನಿರ್ದೇಶನ, ಗ್ರಾಮಸಭೆಗಳಲ್ಲಿ ಹಾಜರಿರಬೇಕಾದ ಇಲಾಖಾಧಿಕಾರಿಗಳು ಮತ್ತು ನೌಕರರ ವಿವರ ಸಹಿತ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಯುವ ವಿವಿಧ ಸಭೆಗಳ ಕುರಿತಂತೆ ಸ್ಪಷ್ಟ ಕಾರ್ಯಾಚರಣೆ ಮಾರ್ಗಸೂಚಿಯನ್ನು ರಾಜ್ಯದ ಗ್ರಾಮೀ­ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಬಿಡುಗಡೆಗೊಳಿಸಿದೆ.ಈ ಮೂಲಕ ಗ್ರಾಮಸಭೆ­ಗೊಂದು ನಿರ್ದಿಷ್ಟ ಚೌಕಟ್ಟು ರೂಪಿಸಿರುವ ಇಲಾಖೆ, ಈ ಗ್ರಾಮಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ಮುಂದಾಗಿದೆ.

Advertisement

ಪಂಚಾಯತ್‌ ರಾಜ್‌ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ ಗ್ರಾಮಸಭೆ ಸೇರುವ 1 ತಿಂಗಳು ಮುನ್ನ ಗ್ರಾಮ ಪಂಚಾಯತ್‌ ಅಧ್ಯಕ್ಷರು ಜನವಸತಿ ಸಭೆ ಮತ್ತು ವಾರ್ಡ್‌ ಸಭೆ ನಡೆಸಿ ಸ್ಥಳೀಯರ ಅಹವಾಲುಗಳನ್ನು ಆಲಿಸಬೇಕು ಎಂದು ತಿಳಿಸಲಾಗಿದೆ. ಇನ್ನು ವರ್ಷಕ್ಕೊಮ್ಮೆ ವಿಶೇಷ ಮಹಿಳಾ ಗ್ರಾಮ ಸಭೆ ಮತ್ತು ಒಂದು ಮಕ್ಕಳ ಗ್ರಾಮಸಭೆ ನಡೆಸಬೇಕೆಂದು ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಯುವ ಈ ಎಲ್ಲ ಸಭೆಗಳಲ್ಲಿ ಪಾಲ್ಗೊಳ್ಳಬೇಕಾದ ಇಲಾಖಾಧಿಕಾರಿಗಳು ಮತ್ತು ನೌಕರರ ವಿವರಗಳನ್ನೂ ಈ ಕಾರ್ಯಾಚರಣೆ ಮಾರ್ಗಸೂಚಿ ಹೊಂದಿದೆ.

ಇದೇ ವೇಳೆ ಈ ಗ್ರಾಮಸಭೆಗಳಲ್ಲಿ ಪ್ರಸ್ತಾವಿಸಬಹುದಾದ ಮತ್ತು ಚರ್ಚಿಸಬಹುದಾದ ವಿಷಯಗಳು ಮತ್ತು ಕೈಗೊಳ್ಳಬಹುದಾದ ನಿರ್ಣ­ಯಗಳ ಕುರಿತಂತೆಯೂ ಮಾರ್ಗದರ್ಶನ ನೀಡಲಾಗಿದೆ. ಒಟ್ಟಿನಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಗ್ರಾಮಸಭೆಗಳಿಗೆ ಒಂದು ಆಯಾಮವನ್ನು ನೀಡಿ, ಈ ಸಭೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಯೋಜನೆಗಳು, ಅವುಗಳ ಅನುಷ್ಠಾನ, ಸರಕಾರದ ನೀಡಲಾಗುತ್ತಿರುವ ವಿವಿಧ ಸವಲತ್ತುಗಳು ನೈಜ ಫ‌ಲಾನುಭವಿಗಳಿಗೆ ತಲುಪುವುದನ್ನು ಖಾತರಿಪಡಿಸಲು ಹಾಗೂ ಜನತೆಯ ಬೇಡಿಕೆ, ಕುಂದುಕೊರತೆ ಮತ್ತಿತರ ವಿಷಯಗಳ ಬಗೆಗೆ ಈ ಹೆಚ್ಚಿನ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ಈ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ತನ್ಮೂಲಕ ಗ್ರಾಮ ಪಂಚಾಯತ್‌ ಆಡಳಿತದಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲು ಸರಕಾರ ಉದ್ದೇಶಿಸಿದೆ.

ಹಾಲಿ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಸದ್ಯ ನಡೆಸಲಾಗುತ್ತಿರುವ ಬಹುತೇಕ ಗ್ರಾಮಸಭೆಗಳು ಕಾಟಾಚಾರದಂತಾಗಿದ್ದು, ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಇಲಾಖೆ ಕೊನೆಗೂ ಅರ್ಥೈಸಿಕೊಂಡಂತೆ ತೋರುತ್ತಿದೆ. ಈ ಕಾರಣದಿಂದಾಗಿಯೇ ಗ್ರಾಮಸಭೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ­ಯನ್ನು ರೂಪಿಸಿ ಬಿಡುಗಡೆ ಮಾಡಿದ್ದು ಇದು ಸದುದ್ದೇಶದಿಂದ ಕೂಡಿದ್ದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸದ್ಯ ನಡೆಯುತ್ತಿರುವ ಗ್ರಾಮಸಭೆಗಳ ಮಾದರಿಯಲ್ಲಿಯೇ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಯುವ ಎಲ್ಲ ಸಭೆಗಳೂ ಸ್ಥಳೀಯ ರಾಜಕಾರಣದ ಜಂಗೀಕುಸ್ತಿಗೆ ಕಾರಣವಾಗುತ್ತಿರುವುದನ್ನು ಕೂಡ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.

ವೈಯಕ್ತಿಕ ಪ್ರತಿಷ್ಠೆ, ರಾಜಕೀಯ ದ್ವೇಷದಂತಹ ಕ್ಷುಲ್ಲಕ ವಿಷಯಗಳು ಗ್ರಾಮಸಭೆಯ ಮಹತ್ವವನ್ನೇ ಹಾಳುಗೆಡವದಂತೆ ಎಚ್ಚರ ವಹಿಸಬೇಕು. ಇನ್ನು ಗ್ರಾಮಸಭೆಗಳು ನಡೆಯುವ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವೆಲ್ಲವುಗಳಿಗಿಂತ ಮುಖ್ಯವಾಗಿ ಗ್ರಾಮಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳ ಅನುಷ್ಠಾನ ಮತ್ತು ಚರ್ಚಿಸಲ್ಪಟ್ಟ ವಿಷಯಗಳ ಬಗೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಸೂಕ್ತ ಪರಿಹಾರ ಕ್ರಮಕೈಗೊಳ್ಳುವುದರತ್ತಲೂ ಇಲಾಖೆ ಗಂಭೀರ ಲಕ್ಷ್ಯ ಹರಿಸಬೇಕು. ಗ್ರಾಮಸಭೆಯ ನಿರ್ಣಯಗಳ ಅನುಷ್ಠಾನ ಮತ್ತು ಜನರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಗ್ರಾಮ ಪಂಚಾಯತ್‌ ಆಡಳಿತವನ್ನು ಉತ್ತರದಾಯಿಯನ್ನಾಗಿ ಮಾಡಿದಾಗಲಷ್ಟೇ ಗ್ರಾಮಸಭೆಯ ನೈಜ ಉದ್ದೇಶ ಈಡೇರಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next