Advertisement

ಹೆತ್ತವರಿಗೆ ಹೆಚ್ಚು ಮಕ್ಕಳ ಜವಾಬ್ದಾರಿ : ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ

01:26 AM Jun 20, 2021 | Team Udayavani |

ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಹೆತ್ತವರೇ ಶಿಕ್ಷಕರು!
ಹೀಗೊಂದು ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಹೊರಡಿಸಿದೆ. ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ದೇಶದಲ್ಲಿ ಶಾಲೆಗಳು ಆರಂಭವಾಗಿಲ್ಲ. ಆದರೂ ಮಕ್ಕಳು ಕಲಿಯಲೇಬೇಕು. ಇದನ್ನು ಗಮನದಲ್ಲಿ ಇರಿಸಿಕೊಂಡು, ನೂತನ ಶಿಕ್ಷಣ ನೀತಿಯ ಆಧಾರದಲ್ಲಿ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಹೆತ್ತವರು ಮಕ್ಕಳ ಕಲಿಕೆಯಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಸೂಚಿಸಿದೆ.

Advertisement

ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು, ಪೂರ್ವ ಪ್ರಾಥ ಮಿಕ ತರಗತಿಯ ಮಕ್ಕಳ ಹೆತ್ತವರು ಶಾಲೆಯ ಸಹಾಯ ಪಡೆದು ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಮಕ್ಕಳ ಜತೆ ಆಟವಾಡಬೇಕು, ಕೆಲಸಗಳಲ್ಲಿ ಅವರನ್ನೂ ತೊಡಗಿಸಿಕೊಳ್ಳಬೇಕು, ಕಥೆ, ಹಾಡುಗಳ ಮೂಲಕ ಪಾಠ ಕಲಿಸಿಕೊಡಬೇಕು, ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನೆನಪಿನ ಶಕ್ತಿ ಹೆಚ್ಚಿಸುವ ಆಟವಾಡಬೇಕು ಎಂಬಿತ್ಯಾದಿಯ ಸಹಿತ ಹಲವಾರು ಸಲಹೆಗಳನ್ನು ನೀಡಲಾಗಿದೆ.

ಮುಖ್ಯವಾಗಿ ಮಕ್ಕಳೊಂದಿಗೆ ಧನಾತ್ಮಕವಾಗಿ ಮಾತನಾಡಬೇಕು. ಪ್ರತೀ ದಿನವೂ 20ರಿಂದ 30 ನಿಮಿಷ ಮಕ್ಕಳ ಜತೆ ಕುಳಿತು  ತರಗತಿಯಲ್ಲಿ ಅವರು ಏನು ಕಲಿತರು ಎಂದು ಕೇಳಬೇಕು, ಶಾಲೆಯಿಂದ ನೀಡಲಾಗಿರುವ ಕಲಿಕೆಯ ಸಾಧನೆಗಳ ಬಗ್ಗೆ ಮಾತನಾಡಬೇಕು. ಮನೆಯಲ್ಲಿ ಇರುವ ಇತರ ಸದಸ್ಯರ ಜತೆ ಮಕ್ಕಳು ಕಲಿಯಲು ಪ್ರೋತ್ಸಾಹ ನೀಡಬೇಕು. ಸಂಖ್ಯಾ ಆಟ, ಪದಗಳ ಆಟ, ಜೋರಾಗಿ ಕಥೆ ಓದುವುದು, ವಂಶವೃಕ್ಷ ನಿರ್ಮಾಣ, ಕುಟುಂಬದ ಕಥೆಯನ್ನು ಬರೆಯಲು ಹೇಳುವುದು, ತಮ್ಮ ಹಳ್ಳಿಗಳ ಇತಿಹಾಸದ ಬಗ್ಗೆ ಮಾತನಾಡುವುದು ಕೂಡ ಈ ಮಾರ್ಗಸೂಚಿಯಲ್ಲಿ ಸೇರಿವೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿ ಮಕ್ಕಳಿಂದ ಚಿತ್ರಕಲೆ, ಹಾಡು, ಕಥೆ, ಕವನ ಬರೆಯುವುದನ್ನು ಮಾಡಿಸಬೇಕು. ತಪ್ಪು ಮಾಡಿದಲ್ಲಿ ಟೀಕಿಸದೆ ಸ್ಫೂರ್ತಿ ಒದಗಿಸಬೇಕು. ಪ್ರೌಢ ತರಗತಿಗಳ ಮಕ್ಕಳಿಗೆ ಸಂಗೀತ ಕಲಿಕೆ, ಸೃಜನಾತ್ಮಕ ಬರವಣಿಗೆ, ವಸ್ತು ಸಂಗ್ರಹಾಲಯಗಳ ವರ್ಚ್ಯುವಲ್ ಟೂರ್‌ ನಡೆಸುವುದು ಇತ್ಯಾದಿ ಸಲಹೆ ನೀಡಲಾಗಿದೆ.

ಈ ವರ್ಷವೂ ಶಾಲೆ ಆರಂಭವಿಲ್ಲ ?
ಹೆಚ್ಚು ಕಡಿಮೆ ಈ ವರ್ಷವೂ ಶಾಲಾರಂಭ ಅಸಾಧ್ಯ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ಸುಳಿವು ನೀಡಿದ್ದಾರೆ.
ತಜ್ಞರ ವರದಿ ಪ್ರಕಾರ 6ರಿಂದ 8 ವಾರಗಳಲ್ಲಿ ದೇಶಕ್ಕೆ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಬೇರೆ ದೇಶಗಳಲ್ಲಿ ಮೊದಲ ಅಲೆಯ ಅನಂತರ ಶಾಲೆಗಳನ್ನು ಆರಂಭಿಸಿ ಮತ್ತೆ ಸೋಂಕು ಹೆಚ್ಚಿ ಮುಚ್ಚಲಾಗಿದೆ. ಶಿಕ್ಷಕರು ಮತ್ತು ಇತರ ಸಿಬಂದಿಗೆ ಲಸಿಕೆ ಹಾಕಿದ ಮೇಲೆಯೇ ಶಾಲೆ ಆರಂಭಿಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಸದ್ಯಕ್ಕೆ ಶಾಲೆ ಆರಂಭವಾಗುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next