ಕೆಲವು ದಿನಗಳ ಹಿಂದೆ ಒಂದು ಪತ್ರಿಕೋದ್ಯಮ ಕಾರ್ಯಕ್ರಮಕ್ಕೆ ನನ್ನ ಸೀನಿಯರ್ ಬಳಿ ಕುಳಿತಿದ್ದೆ. ಥಟ್ಟನೆ ಅವರು “ಇನ್ನು ಕೆಲವೇ ದಿನಗಳಲ್ಲಿ ನಾವು ನಿಮಗೆ ವಿದಾಯ ಹೇಳಲಿದ್ದೇವೆ. ನೀವು ನಮ್ಮನ್ನು ಮಿಸ್ ಮಾಡ್ಕೊಳ್ಳಲ್ವಾ?’ ಎಂದು ಪ್ರಶ್ನೆ ಕೇಳಿಯೇ ಬಿಟ್ಟರು. “ಖಂಡಿತ… ನೀವು ತೆರಳಿದರೆ ಮುಂದೆ ನಮಗೆ ಮಾರ್ಗದರ್ಶನ ನೀಡುವವರಾರು?’ ಎಂದು ಹೇಳುತ್ತಲೇ ನಾನು ಗದ್ಗದಿತಳಾದೆ. ಸೀನಿಯರ್ ಕಣ್ಣಂಚಿನಲ್ಲೂ ನೀರ ಹನಿಯೊಂದು ಥಟ್ಟನೆ ಮಿಂಚಿ ಮರೆಯಾಯಿತು.
ಕಾಲೇಜು ಎಂದಾಗ ನನಗೆ ಮೊದಲು ನೆನಪಾಗುತ್ತಿದ್ದುದೇ ಸೀನಿಯರ್ಸ್ ಮತ್ತು ರ್ಯಾಗಿಂಗ್‌ಗಳು. ಎರಡು ವರ್ಷಗಳ ಹಿಂದೆ ನಾನು ಕಾಲೇಜು ಸೇರಿದ ಬಳಿಕ ನನ್ನ ಈ ಮನೋಭಾವವು ಬದಲಾಗಿಬಿಟ್ಟಿತು.ಕಾಲೇಜು ಸೇರಿದ ಮೊದಲನೆಯ ದಿನವಂತೂ “ಇನ್ನು ಸೀನಿಯರ್‌ಗಳು ಹೇಗಿರುತ್ತಾರೋ ಏನೋ. ಒಂದು ವೇಳೆ ರ್ಯಾಗಿಂಗ್ ಮಾಡಿಬಿಟ್ಟರೆ’ ಎಂಬ ನೂರಾರು ಭಯದ ಯೋಚನೆಗಳು ನನ್ನನ್ನು ಕಾಡುತ್ತಿತ್ತು.ಎರಡನೆಯ ದಿನವಂತೂ ಜೂನಿಯರ್‌ಗಳಿಗೆ ಅಸೋಸಿಯೇಶನ್‌ನ ಬಗ್ಗೆ ಮಾಹಿತಿ ನೀಡಲು ತಂಡ ತಂಡವಾಗಿ ಬರುತ್ತಿದ್ದ ಸೀನಿಯರ್‌ಗಳು ವಿಚಿತ್ರವಾಗಿಯೇ ಕಂಡರು.
ಒಮ್ಮೆ ಸೀನಿಯರ್‌ಗಳಿಬ್ಬರು ನಮ್ಮ ತರಗತಿಗೆ ತಾವಾಗಿಯೇ ಬಂದು ನನ್ನಲ್ಲಿ, “ನೀವು ಪತ್ರಿಕೋದ್ಯಮ ವಿದ್ಯಾರ್ಥಿನಿಯೇ? ನಿಮ್ಮ ವಿಷಯ ಸಂಯೋಜನೆ ತಿಳಿಸಿ. ನಾವು ಪುಸ್ತಕ ನೀಡುತ್ತೇವೆ. ಬೇಕೇ?’ ಎಂದು ಪ್ರಶ್ನಿಸಿದಾಗ, ಅರೆ ! ಜೂನಿಯರ್‌ಗಳ ಬಳಿ ತಾವಾಗಿಯೇ ಬಂದು ಪುಸ್ತಕ ನೀಡುತ್ತೇವೆ ಎನ್ನುವ ಸೀನಿಯರ್‌ಗಳೂ ಇವರೆಲ್ಲ ಎಂದು ಆಶ್ಚರ್ಯಚಕಿತಳಾದೆ. ತದನಂತರ “ಹೇಗಾಗುತ್ತಿದೆ ಹೊಸ ಕಾಲೇಜ್?’ ಎಂದು ತಾವಾಗಿಯೇ ಬಳಿ ಬಂದು ಆಗಾಗ ವಿಚಾರಿಸಿಕೊಳ್ಳುತ್ತಿದ್ದಾಗ ನನ್ನ ಮನದಿಂದ ಸೀನಿಯರ್‌ಗಳು ಎಂಬ ಭಯವನ್ನು ಹೋಗಲಾಡಿಸಿ ಬಿಟ್ಟರು.
ತದನಂತರ ಯಾವ ಕ್ಷಣದಿಂದ ಸೀನಿಯರ್‌ಗಳ ಜೊತೆ ಒಂದು ಉತ್ತಮ ಸಂಬಂಧ ಬೆಳೆದು ಬಂತು ಎಂಬುದು ನೆನಪಿಲ್ಲ. ಆದರೆ, ನಾವು ಭಾತೃ ಪ್ರೇಮದ ಸವಿ ಉಣ್ಣತೊಡಗಿದ್ದೆವು ಎಂಬುದಂತೂ ನಿಜ. ಅದರಲ್ಲೂ ಪತ್ರಿಕೋದ್ಯಮ ವಿಭಾಗದ ಸೀನಿಯರ್‌ಗಳ ಜೊತೆ ಮಾತಿನಲ್ಲಿ ಹೇಳಲಾರದ ಒಂದು ಅಪೂರ್ವ ಸಂಬಂಧವೇರ್ಪಟ್ಟಿತ್ತು. ಒಂದು ಬಾರಿ ಪತ್ರಿಕೋದ್ಯಮ ವಿಭಾಗದಿಂದ ನಮ್ಮ ಸೀನಿಯರ್ ವಿಶ್ವಾಸ್ ಅಡ್ಯಾರ್‌ರವರ ನಿರ್ದೇಶನದ ಕಿರುಚಿತ್ರ ನಿರ್ಮಾಣಕ್ಕೆ ಸೀನಿಯರ್‌ಗಳು-ಜೂನಿಯರ್‌ಗಳು ಒಟ್ಟು ಸೇರಿ¨ªೆವು. ಅದಾಗಲೇ ಕಾಲೇಜು ಪ್ರಾರಂಭವಾಗಿ ಎರಡು ತಿಂಗಳುಗಳಾಗಿರಬೇಕು. ಈ ಮೊದಲು ನನ್ನಲ್ಲಿ ಮಾತನಾಡಿ ಪರಿಚಯವೇ ಇಲ್ಲದ ಸೀನಿಯರ್ ಒಬ್ಬರು ನನ್ನನ್ನು ಅವರ ಬಳಿ ಕರೆದು ನಮ್ಮಿಬ್ಬರ ಮಧ್ಯೆ ಮೊದಲೇ ಪರಿಚಯವಿರುವಂತೆ ಬಲು ಸಲುಗೆಯಿಂದ ಕೆಮರಾ ಹ್ಯಾಂಡಲ್ ಮಾಡುವುದನ್ನು ಕಲಿಸಿಕೊಟ್ಟರು. ನನಗೆ ಮೊತ್ತಮೊದಲು ಕೆಮರಾ ಹ್ಯಾಂಡಲ್ ಮಾಡುವುದನ್ನು ಕಲಿಸಿದ ಸೀರಿಯರ್‌ಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಂತರದ ದಿನಗಳಲ್ಲಿ ನಮಗೆ ಅರಿವಿಲ್ಲದಂತೆಯೇ ಸೀನಿಯರ್‌ಗಳ ನಡುವಿನ ಸಂಬಂಧ ಬೆಳೆದು ಹೆಮ್ಮರವಾಗಿ ನಿಂತಿತ್ತು. ಕೆಲವೊಮ್ಮೆ ಮನಸ್ತಾಪದ ಗಾಳಿ ಬೀಸಿದ್ದರೂ ಭಾವನಾತ್ಮಕ ಸಂಬಂಧದ ನಡುವೆ ಹೆಚ್ಚು ಕಾಲ ಉಳಿಯದೆ ನಮ್ಮ ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಬಿಗಿಯಾಗಿಸಿತ್ತು. ನಮ್ಮ ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಅದನ್ನು ಚಂದಗಾಣಿಸಲು ಸೀನಿಯರ್‌ಗಳು ಮತ್ತು ಜೂನಿಯರ್‌ಗಳು ಎಂಬ ಯಾವುದೇ ಬೇಧವಿಲ್ಲದೆ ಜತೆಯಾಗಿ ದುಡಿಯುತ್ತಿದ್ದೆವು. ನಾವು ಎಡವಿದರೆ ನಮಗೆ ಸರಿದಾರಿ ತೋರಿಸಲು ನಮ್ಮ ಸೀನಿಯರ್‌ಗಳು ಯಾವಾಗಲೂ ರೆಡಿ. ಅಲ್ಲದೆ ಮಾರ್ಗದರ್ಶನ ನೀಡುವುದರಲ್ಲೂ ಎತ್ತಿದ ಕೈ. ಅಂತೆಯೇ ಪ್ರೀತಿವಾತ್ಸಲ್ಯ ತೋರಿಸಿ ಒಡಹುಟ್ಟಿದವರಂತೆ ನಮ್ಮೊಂದಿಗೆ ಬೆರೆಯುವುದರಲ್ಲಿ ಸೈ ಎನಿಸಿಕೊಂಡವರು ನಮ್ಮ ಸೀನಿಯರ್‌ಗಳು. ಇದೀಗ ಸೀನಿಯರ್‌ಗಳಿಗೆ ವಿದಾಯ ಹೇಳುವ ದಿನಗಳು ಸಮೀಪಿಸಿವೆ. ವಿದಾಯ ಹೇಳಬೇಕಾದುದು ಅನಿವಾರ್ಯ. ಹಾಗಂತ ಕಾಲೇಜಿಗೆ ವಿದಾಯ ಹೇಳಿದರೂ ನಮ್ಮ ಮನದಲ್ಲಿ ಮಾತ್ರ ಸೀನಿಯರ್‌ಗಳ ಸ್ಥಾನ ಅದ್ವಿತೀಯ. ಅವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂಬುದೇ ನಮ್ಮ ಆಶೆ.
ತೇಜಶ್ರೀ ಶೆಟ್ಟಿ
ದ್ವಿತೀಯ ಪತ್ರಿಕೋದ್ಯಮ ವಿ. ವಿ. ಕಾಲೇಜು, ಮಂಗಳೂರು